ಲಾಕ್‍ಡೌನ್ ವೇಳೆ ಮದ್ಯ ಕದ್ದು ಹೆಚ್ಚಿನ ಬೆಲೆಗೆ ಮಾರಲು ಪ್ಲಾನ್- 6.60 ಲಕ್ಷ ಮೌಲ್ಯದ ಎಣ್ಣೆ ವಶ

ಹಾಸನ: ಲಾಕ್‍ಡೌನ್ ಸಮಯದಲ್ಲಿ ಎಣ್ಣೆ ಕಳ್ಳತನ ಮಾಡಿ ಮತ್ತೆ ಲಾಕ್‍ಡೌನ್ ಆದರೆ ಹೆಚ್ಚು ಬೆಲೆಗೆ ಮಾರಬಹುದು ಎಂದು ಪ್ಲಾನ್ ಮಾಡಿದ್ದ ಇಬ್ಬರು ಖತರ್ನಾಕ್ ಮದ್ಯ ಕಳ್ಳರನ್ನು ಜಿಲ್ಲೆಯ ಸಕಲೇಶಪುರ ತಾಲೂಕಿನ ಪೊಲೀಸರು ಬಂಧಿಸಿದ್ದಾರೆ.

ಮೋಹನ್ (31) ಮತ್ತು ಚಂದ್ರು (42) ಬಂಧಿತ ಆರೋಪಿಗಳು. ಇತ್ತೀಚಿನ ದಿನಗಳಲ್ಲಿ ಸಕಲೇಶಪುರ ತಾಲೂಕು ಸೇರಿದಂತೆ ಹಾಸನ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವ್ಯಾಪಕವಾಗಿ ಮದ್ಯದ ಕಳ್ಳತನ ನಡೆಯುತ್ತಿತ್ತು. ಹೀಗಾಗಿ ಸಕಲೇಶಪುರ ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು.

ಪೊಲೀಸರ ತನಿಖೆಯಲ್ಲಿ ಇಬ್ಬರು ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಬಂಧಿತರಿಂದ ವಿವಿಧ ಕಂಪನಿಗಳ ಆರು ಲಕ್ಷದ ಅರವತ್ತು ಸಾವಿರ ಮೌಲ್ಯದ ಮದ್ಯ, ಒಂದು ಕಾರು, ಒಂದು ಕಬ್ಬಿಣದ ರಾಡ್ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಲಾಕ್‍ಡೌನ್ ಸಮಯದಲ್ಲಿ ಮದ್ಯ ಕದ್ದು ನಂತರದ ದಿನಗಳಲ್ಲಿ ಹೆಚ್ಚಿನ ಬೆಲೆಗೆ ಮಾರುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಕಲೇಶಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *