ಪುಣೆ: ಮಹಾಮಾರಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲೆಂದು ಇಡೀ ದೇಶವನ್ನೇ ಹಲವು ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹಲವರು ಸಿಲುಕಿಕೊಂಡು ಪರದಾಟ ಅನುಭವಿಸಿದ್ದರು. ಹಾಗೆಯೇ ಯುವಕನೊಬ್ಬ ಕೂಡ ದೆಹಲಿಯಲ್ಲಿ ಸಿಲುಕಿಕೊಂಡಿದ್ದನು. ಈ ವೇಳೆ ಈತ ಕಂಪನಿ ಹಣ ಬಳಕೆ ಮಾಡಿದ್ದನೆಂದು ಆರೋಪಿಸಿ ಆತನನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

ಹೌದು. 30 ವರ್ಷದ ಯುವಕನನ್ನು ಕಂಪನಿ ಮಾಲೀಕ ಸೇರಿ ಮೂವರು ಅಪಹರಿಸಿದ್ದಲ್ಲದೇ ಆತನಿಗೆ ಚಿತ್ರಹಿಂಸೆ ಕೊಟ್ಟ ಘಟನೆ ಮಹಾರಾಷ್ಟ್ರದ ಕೊತ್ರುಡ್ ಎಂಬಲ್ಲಿ ನಡೆದಿದೆ. ಈ ಘಟನೆ ಜೂನ್ 13, 14ರಂದು ಸಂಸ್ಥೆಯ ಕಚೇರಿಯಲ್ಲಿಯೇ ನಡೆದಿದ್ದರೂ, ಜುಲೈ 2ರಂದು ಪೌಡ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರ್ಚ್ ತಿಂಗಳಲ್ಲಿ ಯುವಕ ಕಂಪನಿಗೆ ಸಂಬಂಧಿಸಿದ ಕೆಲಸದ ನಿಮಿತ್ತ ನವದೆಹಲಿಗೆ ತೆರಳಿದ್ದನು. ಈ ವೇಳೆ ಆತನಿಗೆ ಕಂಪನಿಯೇ ಅಲ್ಲಿ ಉಳಿದುಕೊಳ್ಳಲು ಹೋಟೆಲ್ ಒಂದನ್ನು ಬುಕ್ ಮಾಡಿಕೊಟ್ಟಿತ್ತು. ಆದರೆ ಇದೇ ಸಂದರ್ಭದಲ್ಲಿ ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಯುವಕ ದೆಹಲಿಯ ಅದೇ ಹೊಟೇಲಿನಲ್ಲೇ ಉಳಿದುಕೊಳ್ಳಬೇಕಾದ ಅನಿವಾರ್ಯತೆ ಎದುರಾಯ್ತು. ಪರಿಣಾಮ ಕಂಪನಿ ಹಣದಲ್ಲಿಯೇ ಆತ ಲಾಕ್ ಡೌನ್ ಕಳೆದಿದ್ದಾನೆ.

ಹೀಗೆ ಲಾಕ್ ಡೌನ್ ಮುಗಿದ ಬಳಿಕ ಅಂದರೆ ಮೇ 7ರಂದು ಯುವಕ ವಾಪಸ್ ಪುಣೆಗೆ ಬಂದಿದ್ದಾನೆ. ಈ ವೇಳೆ ಕಂಪನಿಯವರು ಆತನನ್ನು 17 ದಿನಗಳ ಕಾಲ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿತ್ತು. ಹೀಗಾಗಿ ಯುವಕ ಸ್ವಂತ ಹಣದಲ್ಲಿ ಹೋಟೆಲೊಂದರಲ್ಲಿ ಕ್ವಾರಂಟೈನ್ ಆಗಿದ್ದಾನೆ. ವಿಪರ್ಯಾಸ ಎಂದರೆ ಕ್ವಾರಂಟೈನ್ ಮಗಿಯುವುದರೊಳಗೆ ಯುವಕನ ಕೈಯಲ್ಲಿ ಹಣ ಖಾಲಿಯಾಗಿತ್ತು.

ಇತ್ತ ಜೂನ್ 13ರಂದು ಯುವಕ ಕೆಲಸಕ್ಕೆ ಹಾಜರಾಗಿದ್ದಾನೆ. ಈ ವೇಳೆ ಸಿಟ್ಟಿಗೆದ್ದ ಕಂಪನಿ ಮಾಲೀಕ ಮತ್ತು ಇನ್ನಿಬ್ಬರು ಸೇರಿ ಆತನನ್ನು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಯುವಕನಿಗೆ ಚೆನ್ನಾಗಿ ಥಳಿಸಿದ್ದಾರೆ. ಅಲ್ಲದೆ ಆತನ ಮರ್ಮಾಂಗಕ್ಕೆ ಸ್ಯಾನಿಟೈಸರ್ ಸುರಿದು ಚಿತ್ರಹಿಂಸೆ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಘಟನೆಯ ಬಗ್ಗೆ ವಿವರಿಸಿದ್ದಾರೆ.
ಸದ್ಯ ಯುವಕ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ಮುಂದುವರಿದಿದ್ದು, ಇದೂವರೆಗೂ ಯಾರನ್ನೂ ಬಂಧಿಸಿಲ್ಲ.


Leave a Reply