ಲಾಕ್‍ಡೌನ್ ಮುನ್ನ ಕಿಡ್ನಾಪ್ – 70 ದಿನಗಳ ನಂತ್ರ ಹಣ ಡ್ರಾ ಮಾಡಲು ಬಂದಾಗ ಸಿಕ್ಕಿಬಿದ್ದ ಗ್ಯಾಂಗ್

– ಕೊರೊನಾ ಲಾಕ್‍ಡೌನ್‍ನಿಂದ ಖತರ್ನಾಕ್ ಗ್ಯಾಂಗ್ ಅರೆಸ್ಟ್

ಬೆಳಗಾವಿ: ಕೋಟ್ಯಂತರ ಮೌಲ್ಯದ ಜಮೀನು, ವಿವಿಧ ಬ್ಯಾಂಕ್‍ಗಳಲ್ಲಿದ್ದ ಲಕ್ಷಾಂತರ ರೂ. ಠೇವಣಿ ಹಣದ ಒಡೆಯನನ್ನೇ ಅಪಹರಿಸಿದ್ದ ಖತರ್ನಾಕ್ ಗ್ಯಾಂಗ್ ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಾಕ್‍ಡೌನ್ ಮುನ್ನ ಕಿಡ್ನಾಪ್ ಮಾಡಿದ್ದ ಖದೀಮರು ಲಾಕ್‍ಡೌನ್ ಸಡಿಲಿಕೆಯಾಗುತ್ತಿದ್ದಂತೆ ಬಾಲ ಬಿಚ್ಚಲು ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ.

ಬೆಳಗಾವಿ ನಗರದ ಬಾಂದೂರ್ ಗಲ್ಲಿಯ ನಿವಾಸಿ ಶ್ರೀಕಾಂತ್ ಚೌಗಲೆ ಅವರನ್ನು ಫೆಬ್ರವರಿ ಮೊದಲ ವಾರದಲ್ಲಿ ಕಿಡ್ನಾಪ್ ಮಾಡಲಾಗಿತ್ತು. ನಗರದ ದೇಶಪಾಂಡೆ ಪೆಟ್ರೋಲ್ ಬಂಕ್ ಸಮೀಪದ ಹೋಟೆಲಿಗೆ ಉಪಹಾರ ತರಲು ಹೋಗಿದ್ದ ಶ್ರೀಕಾಂತ್ ಅವರನ್ನು ಕಾರಲ್ಲಿ ಬಂದ ನಾಲ್ವರು ಅಪಹರಿಸಿಕೊಂಡು ಹೋಗಿದ್ದಾರೆ. ಮಹಾರಾಷ್ಟ್ರದ ಬೆಳವಟ್ಟಿ ಗ್ರಾಮದ ಚೇತನ ಪಾಟೀಲ ಎಂಬಾತನ ಫಾರ್ಮ್ ಹೌಸಿನಲ್ಲಿ 40 ದಿನ ಹಾಗೂ 30 ದಿನ ಸುರೇಶ್ ಪಾಟೀಲ ಎಂಬಾತನ ಮನೆಯಲ್ಲಿ ಬಂಧಿಸಿಡಲಾಗಿತ್ತು. ಈ ವೇಳೆ ಠೇವಣಿ ಹಣ ವಿತ್ ಡ್ರಾ ಮಾಡಿಕೊಡುವಂತೆ ಹಾಗೂ 3 ಎಕರೆ ಜಮೀನು ನಮ್ಮ ಹೆಸರಿಗೆ ಮಾಡಿಕೊಡುವಂತೆ ಪೀಡಿಸಿದ್ದಾರೆ. ಅಷ್ಟೇ ಅಲ್ಲದೆ ದೈಹಿಕವಾಗಿ ಹಲ್ಲೆ ಕೂಡ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಲೋಕೇಶ್ ಕುಮಾರ್ ಹೇಳಿದ್ದಾರೆ.

ಶ್ರೀಕಾಂತ್ ಚೌಗಲೆ ಹೆಸರಿನಲ್ಲಿ ಬೆಳಗಾವಿ ನಗರಕ್ಕೆ ಹೊಂದಿಕೊಂಡಂತೆ 2 ಎಕರೆ ಇಪ್ಪತ್ತು ಗುಂಟೆ ಜಾಗವಿತ್ತು. ಅದರ ಜೊತೆಗೆ ಅಕೌಂಟ್‍ನಲ್ಲಿ 35 ಲಕ್ಷ ಹಣವಿತ್ತು. ಇದೆಲ್ಲವನ್ನ ಲಪಟಾಯಿಸುವ ಉದ್ದೇಶದಿಂದ ಇವರನ್ನು ಕಿಡ್ನಾಪ್ ಮಾಡಲಾಗಿತ್ತು. ಆಸ್ತಿಯನ್ನ ತಮ್ಮ ಹೆಸರಿಗೆ ನೋಂದಾಯಿಸಿಕೊಡುವಂತೆ ಜೀವ ಬೇದರಿಕೆ ಹಾಕಿದ್ದಾರೆ. ಈ ಮಧ್ಯೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ರಿಜಿಸ್ಟರ್ ಕಚೇರಿ ಬಂದ್ ಆಗಿದೆ. ಇದರಿಂದ ದಿಕ್ಕು ತೋಚದಂತಾದ ಅಪಹರಣಕಾರರು ಹೇಗಾದರೂ ಮಾಡಿ ಅಕೌಂಟ್‍ನಲ್ಲಿದ್ದ 35 ಲಕ್ಷ ರೂಪಾಯಿ ವಿತ್ ಡ್ರಾ ಮಾಡಿಕೊಳ್ಳಲು ಸ್ಕೇಚ್ ಹಾಕಿ ಶ್ರೀಕಾಂತ್ ಬಳಿಯಿಂದ ಚೆಕ್ ಬರೆಸಿಕೊಂಡಿದ್ದಾರೆ.

ಬೆಳಗಾವಿ ನಗರದಲ್ಲಿರುವ ಬ್ಯಾಂಕಿನಲ್ಲಿ ಚೆಕ್ ತಂದು ಹಣ ನೀಡುವಂತೆ ಕೇಳಿದ್ದಾರೆ. ಇದಕ್ಕೆ ಬ್ಯಾಂಕ್ ಸಿಬ್ಬಂದಿ ಶ್ರೀಕಾಂತ್ ಅವರನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದಾರೆ. ಈ ಮಧ್ಯೆ ಲಾಕ್‍ಡೌನ್ ಸಡಿಲಿಕೆ ಆಗುತ್ತಿದ್ದಂತೆ ಎರಡು ದಿನಗಳ ಹಿಂದೆ ಅವರನ್ನು ಬ್ಯಾಂಕಿಗೆ ಕರೆದುಕೊಂಡು ಬಂದಿದ್ದಾರೆ. ಆಗ ಹಣ ಡ್ರಾ ಮಾಡಿಕೊಳ್ಳುವಾಗ ಮಾರ್ಕೆಟ್ ಠಾಣೆ ಪೊಲೀಸರು ಮಪ್ತಿಯಲ್ಲಿ ಬಂದು ಕಿಡ್ನಾಪರ್ಸ್ ನ ಬಂಧಿಸಿ ಶ್ರೀಕಾಂತ್ ಅವರನ್ನು ಬಿಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀಕಾಂತ್ ಗೆಳೆಯ ನೀಡಿದ ದೂರಿ ಅನ್ವಯ ಮಾರ್ಕೆಟ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುವಾಗ ಬ್ಯಾಂಕ್ ಸಿಬ್ಬಂದಿ ನೀಡಿದ ಮಾಹಿತಿ ಆಧಾರದ ಮೇಲೆ ಪ್ರಕರಣವನ್ನ ಭೇದಿಸಿದ್ದಾರೆ. ಆರೋಪಿಗಳಾದ ವಿನಾಯಕ ಪ್ರಧಾನ್, ಶಿವನಾಥ್ ರೇಡೆಕರ್, ಮುರಾರಿ ಖಾನಾಪುರೆ, ಅಮಿತ್ ಮಜಗಾಂವಿ, ಅಮಿತ್ ಧಾಮನೆಕರ, ಸಂಜಯ್ ಕೌಜಲಗಿ, ರಾಜು ಗೋಣಿ, ಚೇತನ್ ಪಾಟೀಲ ಹಾಗೂ ಸುರೇಶ್ ಬಂಧಿಸಿದ್ದಾರೆ. ಬಂಧಿತರಿಂದ 5 ಲಕ್ಷದ ಮೌಲ್ಯದ ಕಾರು, 2.5 ಲಕ್ಷ ಮೌಲ್ಯದ 5 ಬೈಕ್ ಗಳು, 11 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಲೋಕೇಶ್ ಕುಮಾರ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *