ಲಾಕ್‍ಡೌನ್ ನಡುವೆಯೂ ಅಮೇಜಾನ್ ಪ್ರೈಮ್‍ನಲ್ಲಿ ‘ವೀಕೆಂಡ್’ ಸಂಭ್ರಮ!

ಇದು ಅನಂತ್ ನಾಗ್ ಮೆಚ್ಚಿ ನಟಿಸಿದ ಚಿತ್ರ!

ಕಳೆದ ವರ್ಷ ಬಿಡುಗಡೆಯಾಗಿ ಪ್ರೇಕ್ಷಕರ ಪ್ರೀತಿ ಪಡೆದುಕೊಂಡ ಸಿನಿಮಾಗಳ ಲಿಸ್ಟಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿರೋ ಚಿತ್ರ `ವೀಕೆಂಡ್’. ಆಧುನಿಕ ಜಗತ್ತಿನ ಪಾಲಿಗೆ ನಿರಾಳ ಭಾವ ಮೂಡಿಸೋ ಶೀರ್ಷಿಕೆಯ ಈ ಸಿನಿಮಾ ಶೃಂಗೇರಿ ಸುರೇಶ್ ನಿರ್ದೇಶನದಲ್ಲಿ ಮೂಡಿ ಬಂದಿತ್ತು. ಕನ್ನಡ ಚಿತ್ರರಂಗದ ವಿವಿಧ ಆಯಾಮಗಳ ಭಾಗವಾಗುತ್ತಾ, ಕಾಲ ಕಾಲಕ್ಕೆ ಅಪ್‍ಡೇಟ್ ಆಗುತ್ತಾ ಬಂದಿರೋ ಸುರೇಶ್ ಅವರು ಈಗಿನ ಯುವ ಸಮುದಾಯದ ತಲ್ಲಣಗಳಿಗೆ ಕಣ್ಣಾಗುವಂಥಾ ಕಥಾನಕದ ದೃಷ್ಯಕಾವ್ಯವನ್ನು ಕಟ್ಟಿ ಕೊಟ್ಟಿದ್ದರು. ಅದು ಎಲ್ಲ ವರ್ಗದ ಪ್ರೇಕ್ಷಕರ ಪಾಲಿಗೂ ತುಂಬಾನೇ ಇಷ್ಟವಾಗಿತ್ತು. ಹೀಗೆ ಗೆಲುವು ಕಂಡಿದ್ದ ಈ ಚಿತ್ರವೀಗ ಅಮೇಜಾನ್ ಪ್ರೈಮ್‍ಗೆ ಲಗ್ಗೆಯಿಟ್ಟಿದೆ.

ಕೊರೋನಾ ಕಾರಣದ ಲಾಕ್‍ಡೌನ್ ಘೋಷಣೆಯಾದಾಗಿನಿಂದಲೂ ಬಹುತೇಕರು ಮನೆಯೊಳಗೇ ಬಂಧಿಯಾಗಿದ್ದಾರೆ. ಇದೀಗ ಕೊಂಚ ಸಡಿಲಿಕೆಯಾಗಿದ್ದರೂ ಕೂಡಾ ಮನೆಯಲ್ಲಿಯೇ ಹೆಚ್ಚಿನ ಕಾಲ ಕಳೆಯದೆ ವಿಧಿಯಿಲ್ಲ. ಇಂಥಾ ಹೊತ್ತಿನಲ್ಲಿ ಜನರ ಪಾಲಿಗೆ ಕೊಂಚ ರಿಲೀಫು ನೀಡಿರೋದು ಸಿನಿಮಾ ಮ್ಯಾಜಿಕ್. ಅಮೇಜಾನ್‍ಪ್ರೈಮ್‍ನಂಥಾ ಆನ್‍ಲೈನ್ ತಾಣಗಳಲ್ಲಿ ಸಿನಿಮಾ ನೋಡಿ ಖುಷಿಗೊಳ್ಳೋ ಪ್ರೇಕ್ಷಕರ ಸಂಖ್ಯೆಯೀಗ ಹೆಚ್ಚಾಗಿದೆ. ಈ ಕಾರಣದಿಂದಲೇ ಅನೇಕ ಕನ್ನಡ ಸಿನಿಮಾಗಳ ಆನ್‍ಲೈನಿನಲ್ಲಿಯೇ ಹಿಟ್ ಆಗಿವೆ. ಇದೀಗ ಆ ಸಾಲಿಗೆ ಸೇರ್ಪಡೆಯಾಗಲು ವೀಕೆಂಡ್ ಚಿತ್ರ ಆಗಮಿಸಿದೆ.

ಹೊರಗಿನಿಂದ ನಿಂತು ದಿಟ್ಟಿಸುವವರಿಗೆ ಹೊಟ್ಟೆಕಿಚ್ಚಾಗುವಂಥ ಇಮೇಜು, ಅದಕ್ಕೆ ಸರಿಯಾಗಿ ರೂಢಿಸಿಕೊಂಡ ಥಳುಕು ಬಳುಕಿನ ಲೈಫ್ ಸ್ಟೈಲ್… ಆದರೆ ಬದುಕಿನ ನೆತ್ತಿಯ ಮೇಲೆ ಸದಾ ನೇತಾಡುತ್ತಲೇ ಇರುವ ಅನಿಶ್ಚಿತತೆಯ ತೂಗುಗತ್ತಿ. ಯಾವುದೇ ಕ್ಷಣದಲ್ಲಿಯಾದರೂ ನೆಚ್ಚಿಕೊಂಡ ಕೆಲಸವನ್ನು ಬಿಟ್ಟು ಬೀದಿಯಲ್ಲಿ ನಿಲ್ಲಬಹುದಾದ ಬದುಕು… ಇದು ಐಟಿ ಬಿಟ ವಲಯದಲ್ಲಿ ಕೆಲಸ ಮಾಡೋರ ಸಾಮಾನ್ಯ ಗೋಳು. ಇಂಥಾ ಅಕ್ಷರಸ್ಥರೇ ಬದುಕಿನ ಅನಿವಾರ್ಯತೆಗೆ ಸಿಕ್ಕಿ ಅಡ್ಡ ದಾರಿ ಹಿಡಿದರೆ, ಕ್ರಿಮಿನಲ್ಲುಗಳಾದರೆ ಅದರ ಪರಿಣಾಮ ಘೋರ. ಇಂಥಾ ವಾಸ್ತವವನ್ನು ಸವರಿಕೊಂಡು ಹೋದಂತೆ ಭಾಸವಾಗುವ ಚೆಂದದ ಕಥೆ ವೀಕೆಂಡ್ ಚಿತ್ರದ್ದು.

ಬದುಕಿಗೆ ಹತ್ತಿರಾದ ಕಥೆಯೊಂದಿಗೆ ನಿರ್ದೇಶಕರು ವೀಕೆಂಡ್ ಅನ್ನು ನಿರೂಪಿಸಿದ್ದಾರೆ. ಹಾಗಂತ ಈ ಸಿನಿಮಾ ಇಂಥಾ ಒಳತೋಟಿ, ತಲ್ಲಣಗಳಲ್ಲಿಯೇ ಕಳೆದು ಹೋಗಿದೆ ಅಂದುಕೊಳ್ಳಬೇಕಿಲ್ಲ. ಕಾಮಿಡಿ, ಪ್ರೀತಿ ಸೇರಿದಂತೆ ಎಲ್ಲೆಲ್ಲಿ ಯಾವುದನ್ನು ಬೆರೆಸಬೇಕೋ ಅದನ್ನು ಅಚ್ಚುಕಟ್ಟಾಗಿಯೇ ಮಾಡಲಾಗಿದೆ. ಆದ್ದರಿಂದಲೇ ವೀಕೆಂಡ್ ಎಂಬುದು ಸಂಪೂರ್ಣ ಎಂಟರ್ಟೈನ್ಮೆಂಟ್ ಪ್ಯಾಕೇಜಿನಂತೆ ಮೂಡಿ ಬಂದಿದೆ. ಅನಂತ್ ನಾಗ್ ಎಂಬ ಮೇರು ನಟ ಈ ಚಿತ್ರದ ಪ್ರಧಾನ ಆಕರ್ಷಣೆ. ಅವರಿಲ್ಲಿ ಸಾಫ್ಟ್‍ವೇರ್ ಮೊಮ್ಮಗನ ತಾತನಾಗಿ, ತಪ್ಪಾದಾಗ ತಿದ್ದುವ ಹಿರಿಯನ ಪಾತ್ರವನ್ನು ಎಂದಿನಂತೆಯೇ ಮನಸೋರೆಗೊಳ್ಳುವಂತೆ ನಿರ್ವಹಿಸಿದ್ದಾರೆ.

ನಿಖರವಾಗಿ ಹೇಳಬೇಕೆಂದರೆ, ಈ ಸಿನಿಮಾ ಲಾಕ್‍ಡೌನ್ ಕಾಲಮಾನದಲ್ಲಿ ನೋಡುಗರೆಲ್ಲರಿಗೂ ಹೊಸಾ ಅನುಭೂತಿ ನೀಡುವಷ್ಟು ಚೆಂದಗೆ ಮೂಡಿ ಬಂದಿದೆ. ಅನಂತ್ ನಾಗ್ ಅವರೇ ತುಂಬಾ ಇಷ್ಟಪಟ್ಟು ನಟಿಸಿರೋ ಸಿನಿಮಾವಿದು. ಅನಂತ್ ನಾಗ್ ಅವರ ಕಟ್ಟುನಿಟ್ಟು ಅದೆಂಥಾದ್ದೆಂಬುದು ಪ್ರೇಕ್ಷಕರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಯಾವುದೇ ಕಥೆ ಒಪ್ಪಿತವಾಗದೆ ಅವರು ಒಪ್ಪಿಗೆ ಸೂಚಿಸೋ ಜಾಯಮಾನದವರಲ್ಲ. ಅವರೇನಾದರೂ ಇಷ್ಟಪಟ್ಟರೆಂದರೆ, ಅದೊಂದು ಪ್ರಶಸ್ತಿ ಇದ್ದಂತೆಯೇ. ಅಂಥಾ ಅನಂತ್ ನಾಗ್ ಅವರಿಂದಲೇ ಮೆಚ್ಚುಗೆ ಪಡೆದ ಚಿತ್ರವೆಂದ ಮೇಲೆ ವೀಕೆಂಡ್ ಬಗ್ಗೆ ಮತ್ತೇನನ್ನೂ ಹೇಳುವ ಅವಶ್ಯಕತೆಯಿಲ್ಲ. ಲಾಕ್‍ಡೌನ್ ಕಾಲದ ನಿಮ್ಮೆಲ್ಲದ ಏಕತಾನತೆ ವೀಕೆಂಡ್‍ನೊಂದಿಗೆ ನೀಗುವಂತಾಗಲಿ…

Comments

Leave a Reply

Your email address will not be published. Required fields are marked *