ಲಾಕ್‍ಡೌನ್ ಎಫೆಕ್ಟ್- ಪಾರ್ಶ್ವವಾಯು ಪೀಡಿತ ಪತಿ, ಮಾನಸಿಕ ಅಸ್ವಸ್ಥ ಮಗನೊಂದಿಗೆ ತಾಯಿ ಬೀದಿ ಪಾಲು

ಬೆಳಗಾವಿ: ಕೊರೊನಾ ತಡೆಗಟ್ಟಲು 75 ದಿನಗಳ ಲಾಕ್‍ಡೌನ್ ಬಳಿಕ ಅನ್‍ಲಾಕ್ ಜಾರಿಗೆ ಬಂದು ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಲಾಕ್‍ಡೌನ್ ಎಫೆಕ್ಟ್ ಗೆ ಬಡ ಕುಟುಂಬಗಳ ಬದುಕು ಮೂರಾಬಟ್ಟೆಯಾಗಿದೆ. ಕೊರೊನಾ ಜನರ ಜೀವ ಹಿಂಡುತ್ತಿರುವುದಷ್ಟೇ ಅಲ್ಲದೇ ಜನರ ಮಾನವೀಯ ಮೌಲ್ಯಗಳನ್ನು ಕಿತ್ತುಕೊಂಡಿತಾ ಎಂಬ ಅನುಮಾನ ಕಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಬೆಳಗಾವಿಯಲ್ಲಿ ಒಂದು ಘಟನೆ ನಡೆದಿದೆ.

ಹೌದು. ಲಾಕ್‍ಡೌನ್ ಎಫೆಕ್ಟ್ ಗೆ ಅದೆಷ್ಟೋ ಬಡ ಕೂಲಿಕಾರ್ಮಿಕರು, ದಿನಗೂಲಿ ನೌಕರರು, ಕಟ್ಟಡ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಆದರೆ ಇಲ್ಲಿ ಮನೆ ಬಾಡಿಗೆ ಕಟ್ಟಲಾಗದಿದ್ದಕ್ಕೆ ಕುಟುಂಬವೊಂದನ್ನು ಮನೆ ಮಾಲೀಕ ಹೊರಹಾಕಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪಾರ್ಶ್ವವಾಯು ಪೀಡಿತ ಪತಿ, ಮಾನಸಿಕ ಅಸ್ವಸ್ಥ ಮಗ ಹಾಗೂ ತಾಯಿ ಬೀದಿ ಪಾಲಾಗಿದ್ದಾರೆ.

ಮನೆಗೆಲಸ ಮಾಡಿ ಜೀವನ ಸಾಗಿಸ್ತಿದ್ದ ಕರಜಗಿ ಗ್ರಾಮದ ಕಮಲಗೆ ಲಾಕ್‍ಡೌನ್ ಅವಧಿಯಲ್ಲಿ ಮನೆ ಬಾಡಿಗೆ ಕಟ್ಟಲು ಆಗಿರಲಿಲ್ಲ. ಇದರಿಂದ ಮನೆ ಮಾಲೀಕ ಇವರನ್ನು ಹೊರಹಾಕಿದ್ದಾನೆ. ಸದ್ಯ ಈ ಕುಟುಂಬವೀಗ ಸಂಭಾಜಿ ಮೈದಾನದ ಪ್ರೇಕ್ಷಕರ ಗ್ಯಾಲರಿಯ ಮೆಟ್ಟಿಲುಗಳ ಕೆಳಗೆ ವಾಸಿಸುತ್ತಿದೆ. ಕೊರೊನಾ ಭೀತಿಯಿಂದ ಮನೆಗೆಲಸಕ್ಕೆ ಯಾರೊಬ್ಬರೂ ಕರೆಯುತ್ತಿಲ್ಲ. ಜೀವನ ಹೇಗೋ ಗೊತ್ತಿಲ್ಲ ಅಂತ ಕಮಲ ಮೀರಜಕರ್ ಕಣ್ಣೀರು ಹಾಕುತ್ತಿದ್ದಾರೆ.

ಈ ವಿಷಯ ಗೊತ್ತಾದ ಕೂಡಲೇ ಕನ್ನಡಪರ ಸಂಘಟನೆಗಳ ಜಿಲ್ಲಾ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ ಭೇಟಿ ನೀಡಿ, ಅಗತ್ಯ ಪಡಿತರ, ಧನ ಸಹಾಯ ಮಾಡಿದರು. ಅಲ್ಲದೆ ಮಹಾನಗರ ಪಾಲಿಕೆ ಅಧಿಕಾರಿಗಳು ವಸತಿ ಮತ್ತು ಚಿಕಿತ್ಸೆಯ ಭರವಸೆ ನೀಡಿದರು.

ಒಟ್ಟಾರೆ ಲಾಕ್‍ಡೌನ್ ಎಫೆಕ್ಟ್ ಗೆ ದಿನಗೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿ ಇವರಂತಹ ಎಷ್ಟೋ ಕುಟುಂಬಗಳು ಇಂದು ಬೀದಿಗೆ ಬಿದ್ದಿವೆ.

Comments

Leave a Reply

Your email address will not be published. Required fields are marked *