ಲಾಕ್‍ಡೌನ್ ಅವಧಿಯ ಪರಿಹಾರ ಧನ ಪಡೆಯಲು ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಿ: AAP ಆಗ್ರಹ

ಬೆಂಗಳೂರು: ಕರ್ನಾಟಕದ ಸರ್ಕಾರ ಸದ್ಯದ ಲಾಕ್‍ಡೌನ್ ಅವಧಿಯಲ್ಲಿ ಘೋಷಿಸಿರುವ ನೆರವಿನ ಧನವನ್ನು ಸೇವಾ ಸಿಂಧು ಆಪ್ ಮೂಲಕ ಪಡೆಯುವ ಪ್ರಕ್ರಿಯೆ ಅತ್ಯಂತ ಗೊಂದಲಮಯವಾಗಿದೆ. ಅರ್ಜಿ ಸಲ್ಲಿಸಲು ಸರ್ಕಾರ ಜೂನ್ 15 ಕೊನೆಯ ದಿನವಾಗಿ ನಿಗದಿ ಮಾಡಿದೆ. ಆದರೆ ಈ ಬಗ್ಗೆ ಆರಿವಿಲ್ಲದ ಸಾವಿರಾರು ಕಾರ್ಮಿಕರಿಗೆ ಅರ್ಜಿ ತುಂಬಲಾಗದು. ಸರ್ಕಾರ ತಕ್ಷಣ ಅರ್ಜಿ ಸಲ್ಲಿಸುವ ಅವಧಿಯನ್ನು ಈ ತಿಂಗಳ ಕೊನೆಯ ತನಕ ವಿಸ್ತರಿಸಬೇಕು ಎಂದು ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ ಆಗ್ರಹಿಸಿದರು.

ಆಮ್ ಆದ್ಮಿ ಪಾರ್ಟಿಯ ಮಾಧ್ಯಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇವರು, ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ಲಾಕ್‍ಡೌನ್ ಜಾರಿಯ ಹಿನ್ನೆಲೆಯಲ್ಲಿ ಸರ್ಕಾರ ಚಮ್ಮಾರ, ಅಕ್ಕಸಾಲಿಗ ಮೊದಲಾದ ಸಂಘಟಿತ ವಲಯಗಳು ಮತ್ತು ಆಟೋ ಹಾಗೂ ಕ್ಯಾಬ್ ಚಾಲಕರಿಗೆ ಒಂದು ಬಾರಿಯ ಆರ್ಥಿಕ ಪರಿಹಾರವನ್ನು ಘೋಷಿಸಿದೆ. ಆದರೆ ಅನೇಕ ಫಲಾನುಭವಿಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ತಾಂತ್ರಿಕ ಪ್ರಕ್ರಿಯೆಯ ಬಗ್ಗೆ ಅರಿವಿಲ್ಲ. ಇದರಿಂದ ಸಾವಿರಾರು ಮಂದಿಗೆ ಈ ಪರಿಹಾರ ಧನ ತಲುಪುತ್ತಿಲ್ಲ. ಹೀಗಾಗಿ ಪಕ್ಷದ ಕಾರ್ಯಕರ್ತರು ಮನೆ ಮನೆಗಳಿಗೆ ಹೋಗಿ, ಬೂತ್ ತೆರೆದು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಅರ್ಜಿ ತುಂಬಿ ನೆರವಾಗುವ ಅಭಿಯಾನ ನಡೆಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದ ಪಕ್ಷದ ಮಹಿಳಾ ಮುಖಂಡರಾದ ಉಷಾ ಮೋಹನ್ ಅವರು ಕಳೆದ ಬಾರಿ ಘೋಷಿಸಿದ ಪರಿಹಾರ ಧನದಿಂದ ಸಾವಿರಾರು ಫಲಾನುಭವಿಗಳು ವಂಚಿತರಾಗಿದ್ದಾರೆ. ಇದಕ್ಕೆ ಸೇವಾ ಸಿಂಧು ಆಪ್ ನಲ್ಲಿ ಇದ್ದ ತಾಂತ್ರಿಕ ಸಮಸ್ಯೆಗಳು ಕಾರಣ. ಅಲ್ಲದೇ ತಾಂತ್ರಿಕ ವಿಚಾರಗಳ ಬಗ್ಗೆ ಅರಿವಿಲ್ಲದೆ ಅರ್ಜಿ ತುಂಬಲು ತಿಳಿಯದೆ ಈ ಯೋಜನೆ ತಳಮಟ್ಟದ ತನಕ ತಲುಪಿಲ್ಲ. ಈ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯವು ಸಹ ವಿಚಾರಣೆ ನಡೆಸಿ ಸರಳೀಕರಣ ಉಳಿಸಬೇಕೆಂದು ಸರ್ಕಾರಕ್ಕೆ ನಿರ್ದೇಶನ ನೀಡಿರುವುದು ಉಲ್ಲೇಖನಾರ್ಹ. ಸರ್ಕಾರ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿಲ್ಲ. ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅರ್ಜಿ ತುಂಬುವ ಪ್ರಕ್ರಿಯೆಯನ್ನು ಸರಳೀಕೃತಗೊಳಿಸಬೇಕು ಎಂದು ಆಗ್ರಹಿಸಿದರು.

Comments

Leave a Reply

Your email address will not be published. Required fields are marked *