– ಮೂವರು ಮಕ್ಕಳನ್ನು ಕಳೆದುಕೊಂಡ ತಂದೆ ಕಣ್ಣೀರು
ರಾಂಚಿ: ತನ್ನ ಮದುವೆ ಮುಂದೂಡಿದ್ದರಿಂದ ಮನನೊಂದ 30 ವರ್ಷದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಜಮ್ಶೆಡ್ ಪುರದ ವಿಶ್ವಕರ್ಮ ನಗರದಲ್ಲಿ ನಡೆದಿದೆ.
ಯುವಕನನ್ನು ಸಂಜೀತ್ ಗುಪ್ತಾ ಎಂದು ಗುರುತಿಸಲಾಗಿದೆ. ಮದುವೆ ಮುಂದೂಡಿಕೆಯಾದ ಬಳಿಕ ಯುವಕ ತುಂಬಾ ಬೇಸರಗೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಶನಿವಾರ ರಾತ್ರಿ ಸಂಜೀತ್ ಊಟ ಮುಗಿಸಿ ತನ್ನ ರೂಮಿಗೆ ತೆರಳಿದ್ದಾನೆ. ಎಂದಿನಂತೆ ಮನೆಯಲ್ಲಿ ಎಲ್ಲರೂ ಮಲಗಿದ್ದಾರೆ. ಈ ಮಧ್ಯೆ ಮುಂಜಾನೆ 4 ಗಂಟೆ ಸುಮಾರಿಗೆ ಸಂಜೀತ್ ತಂದೆ ಎಚ್ಚರವಾಗಿದೆ. ಈ ವೇಳೆ ಸಂಜೀತ್ ಮನೆಯ ಹಾಲ್ ನಲ್ಲಿರುವ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವುದು ಕಂಡಿದ್ದು, ಪ್ರಕರಣ ಬೆಳಕಿಗೆ ಬಂದಿದೆ.
ಇತ್ತ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಮಗನ ಮೃತದೇಹಕ್ಕಾಗಿ ಕಾಯುತ್ತಿದ್ದ ತಂದೆ ದುಃಖಿತರಾಗಿದ್ದಾರೆ. ಬಿಹಾರದ ಔರಂಗಾಬಾದ್ ಯುವತಿಯೊಂದಿಗೆ ನನ್ನ ಮಗನ ಮದುವೆ ನಿಶ್ಚಯವಾಗಿತ್ತು. ಹಾಗೆಯೇ ಏಪ್ರಿಲ್ 25ರಂದು ಮದುವೆ ಕೂಡ ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್ ನಿಂದಾಗಿ ದೇಶಾದ್ಯಂತ ಲಾಕ್ ಡೌನ್ ಹೇರಿದ ಪರಿಣಾಮ ಮದುವೆ ಮುಂದೂಡಿಕೆಯಾಗಿತ್ತು. ಈ ವಿಚಾರ ಮಗನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಸಂಜೀತ್ ತಂದೆ ರಾಜೇಂದ್ರ ತಿಳಿಸಿದ್ದಾರೆ.

ಮದುವೆ ಮುಂದೂಡಿಕೆಯಾದ ಬಳಿಕ ಸಂಜೀತ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಕುಟುಂಬ ಹಾಗೂ ಗೆಳೆಯರ ಜೊತೆ ಕೂಡ ಮಾತನಡುವುದನ್ನು ನಿಲ್ಲಿಸಿದ್ದನು. ಲಾಕ್ ಡೌನ್ ನಿಂದಾಗಿಯೇ ನನ್ನ ಮಗ ಈ ನಿರ್ಧಾರಕ್ಕೆ ಬರಲು ಕಾರಣ. ಆತನನ್ನು ಸಮಾಧಾನಪಡಿಸಲು ಹಲವು ರೀತಿಯಲ್ಲಿ ಪ್ರಯತ್ನ ಮಾಡಲಾಗಿತ್ತು. ಆದರೆ ನನ್ನ ಮಗ ಮಾತ್ರ ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ.
ಸಂಜೀತ್ ಸಾವಿನಿಂದಾಗಿ ಇಂದು ನಾನು ನನ್ನ ಮೂವರು ಮಕ್ಕಳನ್ನು ಕಳೆದುಕೊಂಡಿದ್ದೇನೆ. ಸಂಜೀತ್ ಗಿಂತ ಮೊದಲು ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದೇನೆ. ಅದರಲ್ಲಿ ಓರ್ವ 2000ನೇ ಇಸವಿಯಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟರೆ, ಮತ್ತೋರ್ವ ಮಗ 2012ರಿಂದ ಕಾಣೆಯಾಗಿದ್ದಾನೆ ಎಂದು ರಾಜೇಂದ್ರ ಬೇಸರ ವ್ಯಕ್ತಪಡಿಸಿದರು.


Leave a Reply