ಲಾಂಗ್, ಮಚ್ಚುಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಕೊಲೆ

– ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು

ಚಿಕ್ಕಬಳ್ಳಾಪುರ: ಲಾಂಗು-ಮಚ್ಚುಗಳಿಂದ ಕೊಚ್ಚಿ ರೌಡಿಶೀಟರ್‍ನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಾದಲವೇಣಿ ಗ್ರಾಮದಲ್ಲಿ ನಡೆದಿದೆ.

ಹಳೆ ಉಪ್ಪಾರಹಳ್ಳಿ ಗ್ರಾಮದ 28 ವರ್ಷದ ರಮೇಶ್ ಕೊಲೆಯಾದ ರೌಡಿ ಶೀಟರ್. ಪ್ರಕರಣ ಬೆನ್ನತ್ತಿದ್ದ ಪೊಲೀಸರು, 4 ಆರೋಪಿಗಳನ್ನು ಬಂಧಿಸಿದ್ದಾರೆ. ಹೊಸೂರು ಗ್ರಾಮದ ಅರ್ಜುನ್, ಕಾಚಮಾಚೇನಹಳ್ಳಿಯ ವೆಂಕಟರೆಡ್ಡಿ, ಮುದೆಗೆರೆಯ ವೆಂಕಟೇಶ್ ಹಾಗೂ ಅಂಬರೀಶ್ ಬಂಧಿತರು.

ಕೋಟಾಲದಿನ್ನೆ ಬಳಿಯಿಂದ ಬೈಕ್ ನಲ್ಲಿ ತೆರಳುತ್ತಿದ್ದ ರಮೇಶ್‍ನನ್ನು ಹಿಂಬಾಲಿಸಿದ ಮೂವರು ಆತನ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ರಮೇಶ್ ಬೈಕ್ ಬಿಟ್ಟು ಕಾದಲವೇಣಿ ಗ್ರಾಮದ ಮನೆಗೆ ನುಗ್ಗಿದ್ದಾನೆ. ಆದರೂ ಬಿಡದ ಕೊಲೆಪಾತಕರು, ಮನೆಯಲ್ಲೇ ಲಾಂಗ್ ಮಚ್ಚುಗಳಿಂದ ತಲೆ, ಎದೆ ಭಾಗದಲ್ಲಿ ಕೊಚ್ಚಿ ಕೊಲೆ ಮಾಡಿದ್ದಾರೆ. ಇದರಿಂದ ಮನೆಯಲ್ಲಿದ್ದವರು ಹಾಗೂ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ನಡುವೆ ಆರೋಪಿ ಅಂಬರೀಶ್ ಬಂಧಿಸಿ ಕೃತ್ಯಕ್ಕೆ ಬಳಿಸಿದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲು ತೆರಳಿದ್ದ ವೇಳೆ ಪೊಲೀಸ್ ಕಾನ್‍ಸ್ಟೇಬಲ್ ಮಧೂ ಅವರ ಮೇಲೆ ಕಲ್ಲು ಎತ್ತಿ ಹಾಕಲು ಯತ್ನಿಸಿದ್ದ. ಈ ವೇಳೆ ಆರೋಪಿ ಅಂಬರೀಶ್ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ.

ಸದ್ಯ ಐದು ಮಂದಿಯ ವಿಚಾರಣೆ ನಡೆಸುತ್ತಿರುವ ಪೊಲೀಸರು, ಕೊಲೆಗೆ ನಿಖರ ಕಾರಣ ಏನೆಂಬುದುರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೇಲ್ನೋಟಕ್ಕೆ ಹಳೆ ದ್ವೇಷವೇ ಕೊಲೆಗೆ ಕಾರಣ ಇರಬಹುದು ಎಂದು ಅಂದಾಜಿಸಲಾಗಿದ್ದು, ಕಳೆದ ವಿಧಾನಸಭೆ ಚುನಾವಣೆ ವೇಳೆ ಕೋಟಾಲದಿನ್ನೆ ಬಾರ್ ಬಳಿ ಕ್ಷುಲ್ಲಕ ಕಾರಣಕ್ಕೆ ರಾಮರೆಡ್ಡಿ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ರಮೇಶ್ ಸಹ ಆರೋಪಿಯಾಗಿದ್ದ. ಹೀಗಾಗಿ ಅದೇ ಹಳೆ ದ್ವೇಷದ ಸೇಡು ಕೊಲೆಗೆ ಕಾರಣವಾಯಿತೇ ಎಂಬ ಅನುಮಾನ ಮೂಡಿದೆ.

Comments

Leave a Reply

Your email address will not be published. Required fields are marked *