ಲವ್ ಜಿಹಾದ್ ಸಂಬಂಧ ಕಾನೂನು ತರುವ ಆಲೋಚನೆಯೇ ಇಲ್ಲ: ಮಾಧುಸ್ವಾಮಿ

– ಎಲ್ಲರೂ ಮಿಕ್ಸ್ ಆಗಿರುವುದೇ ಭಾರತ ದೇಶ

ಚಿಕ್ಕಮಗಳೂರು: ಲವ್ ಜಿಹಾದ್ ಸಂಬಂಧ ಕಾನೂನು ತರುವ ಆಲೋಚನೆಯೇ ಇಲ್ಲ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿಯವರು ಹೇಳಿದ್ದಾರೆ.

ಇಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ತಲೆಕೆಟ್ಟ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಲವ್ ಜಿಹಾದ್ ಸಂಬಂಧ ಕಾನೂನು ತರುವ ಆಲೋಚನೆಯೇ ನಮ್ಮ ಮುಂದೆ ಇಲ್ಲ. ಸಿದ್ದರಾಮಯ್ಯ ಒಂದು ಸಮುದಾಯವನ್ನು ಓಲೈಸಲು ಈ ರೀತಿಯ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನು ಓದಿ: ಹಿಂದೂ, ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದವರು ಬಹಳ ಜನ ಇದ್ದಾರೆ: ಸಿದ್ದರಾಮಯ್ಯ

ಹಿಂದೂ-ಮುಸ್ಲಿಂ ಕ್ರಾಸ್ ಆಗಿ ಹುಟ್ಟಿರುವವರು ಇದ್ದಾರೆ ಎಂಬ ಹೇಳಿಕೆ ಉತ್ತರಿಸಿದ ಸಚಿವರು, ಎಲ್ಲರೂ ಮಿಕ್ಸ್ ಆಗಿರುವುದೇ ಭಾರತ ದೇಶ. ಈ ದೇಶದಲ್ಲಿರುವ ಶೇಕಡ 60 ರಿಂದ 70ರಷ್ಟು ಮುಸ್ಲಿಂ-ಕ್ರಿಶ್ಚಿಯನ್‍ಗಳು ಒಂದು ಕಾಲದಲ್ಲಿ ಮೂಲ ಹಿಂದುಗಳೆ. ಹೀಗಾಗಿ ಈ ರೀತಿ ಹೇಳಿಕೆ ನೀಡಿ ಜನರನ್ನು ಪ್ರಚೋದನೆ ಮಾಡುವುದು ಸರಿಯಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾಧುಸ್ವಾಮಿಯವರು ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ವೇಳೆ ಹೆಚ್. ವಿಶ್ವನಾಥ್ ಬಗ್ಗೆ ಮಾತನಾಡಿ, ನಾವು ವಿಶ್ವನಾಥ್ ಪರ ಇದ್ದೇವೆ. ನಮ್ಮ ಜೊತೆ ಬಂದ ಯಾರಿಗೂ ಬೆನ್ನಿಗೆ ಚೂರಿ ಹಾಕುವುದಿಲ್ಲ. ಅವರು ಚುನಾವಣೆಯಲ್ಲಿ ಸೋತರು ಎಂ.ಎಲ್.ಸಿ ಆಗಿದ್ದಾರೆ. ಸೋತವರಿಗೆ ಬೇರೆ ಯಾವ ಪಕ್ಷದಲ್ಲಿಯೂ ಈ ಮನ್ನಣೆ ಸಿಗುತ್ತಿರಲಿಲ್ಲ. ಅಡ್ವೋಕೇಟ್ ಜರ್ನಲ್ ಹಾಗೂ ನಾವು ಏನು ಮಾಡಬೇಕು ಅದನ್ನು ಮಾಡಿದ್ದೀವಿ. ಅದನ್ನು ಮೀರಿ ಕೋರ್ಟಿನ ತೀರ್ಮಾನಕ್ಕೆ ಯಾರನ್ನೂ ದೂಷಿಸುವಂತಿಲ್ಲ. ನಾವು ಅಪೀಲ್ ಹೋಗುತ್ತೇವೆ ಮತ್ತೊಂದು ಪ್ರಯತ್ನ ಮಾಡುತ್ತೇವೆ. ಅವರಿಗೆ ಮೋಸ ಆಗಲು ಬಿಡುವುದಿಲ್ಲ ಎಂದರು.

Comments

Leave a Reply

Your email address will not be published. Required fields are marked *