ಲಕ್ಷಾಂತರ ಮೀನುಗಳ ಮಾರಣಹೋಮ – 150 ಕುಟುಂಬಗಳ ಆದಾಯಕ್ಕೆ ಕೊಡಲಿಪೆಟ್ಟು

– ದುಷ್ಕರ್ಮಿಗಳಿಂದ ವಿಷಪ್ರಾಶನ ಶಂಕೆ

ರಾಯಚೂರು: ತಾಲೂಕಿನ ಕಟ್ಲಾಟಕೂರ ಕೆರೆಯ ನೀರು ರಾತ್ರೋ ರಾತ್ರಿ ವಿಷವಾಗಿದ್ದು ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ. ಇದರಿಂದ ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದ ಗ್ರಾಮದ 150 ಕುಟುಂಬಗಳ ಮುಖ್ಯ ಆದಾಯಕ್ಕೆ ಕತ್ತರಿ ಬಿದ್ದಿದೆ.

ಕೆರೆಯಲ್ಲಿನ 5 ಲಕ್ಷಕ್ಕೂ ಹೆಚ್ಚು ಮೀನುಗಳು ಸಾವನ್ನಪ್ಪಿದ್ದು ಮೀನುಗಾರರು ಬೀದಿಗೆ ಬರುವಂತಾಗಿದೆ. ಕೆರೆಯ ನೀರಿಗೆ ವಿಷಪ್ರಾಶನವಾಗಿದ್ದು ಬಹುತೇಕ ಎಲ್ಲಾ ಮೀನುಗಳು ಸಾವನ್ನಪ್ಪಿವೆ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 350 ಎಕರೆ ಪ್ರದೇಶದ ಕೆರೆ ಈ ವರ್ಷ ಸತತವಾಗಿ ಸುರಿದ ಮಳೆಯಿಂದ ಸಂಪೂರ್ಣ ತುಂಬಿತ್ತು. ಹೀಗಾಗಿ ಮೀನುಗಾರರು ಒಳ್ಳೆಯ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಒಂದು ರಾತ್ರಿ ಕಳೆಯುವದರೊಳಗೆ ಲಕ್ಷಾಂತರ ಮೀನುಗಳ ಮಾರಣಹೋಮ ನಡೆದಿದೆ.

ಮೂರು ತಿಂಗಳ ಕೆಳಗೆ ಆಂಧ್ರಪ್ರದೇಶದ ಕಾಕಿನಾಡದಿಂದ ಕಟ್ಲಾ, ರೂಹು, ಮೃಗಲಾ ಸೇರಿ ನಾನಾ ತಳಿಯ ಐದು ಲಕ್ಷಕ್ಕೂ ಅಧಿಕ ಮೀನು ಮರಿಗಳನ್ನು ತಂದು ಕೆರೆಗೆ ಬಿಡಲಾಗಿತ್ತು. ಇನ್ನೂ ಮೂರು ತಿಂಗಳು ಕಳೆದಿದ್ದರೆ ಮೀನುಗಾರರಿಗೆ ಫಸಲು ಕೈಸೇರುತ್ತಿತ್ತು. ಅಷ್ಟರಲ್ಲೇ ಈ ಅವಾಂತರ ನಡೆದಿದೆ. ಗುಂಜಳ್ಳಿಯ ಗಂಗಾಮತಸ್ಥರ ಮೀನುಗಾರರ ಸಹಕಾರ ಸಂಘದ ಅಡಿಯಲ್ಲಿ 150 ಕುಟುಂಬಗಳು ಬಂಡವಾಳ ಹಾಕಿವೆ. ಈಗ ಮೀನುಗಳು ಸತ್ತಿರುವುದರಿಂದ ಸುಮಾರು 25 ಲಕ್ಷ ರೂಪಾಯಿ ನಷ್ಟವಾಗಿದೆ.

ಪ್ರತಿವರ್ಷ ಮಳೆಯ ಕೊರತೆಯಿಂದ ಕೆರೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಆದರೆ ಈ ವರ್ಷ ಕೆರೆ ತುಂಬಿದ್ದರಿಂದ ಉತ್ತಮ ಫಸಲು ಬರುವ ಎಲ್ಲಾ ಸಾಧ್ಯತೆಗಳು ಇದ್ದವು. ಈಗ ಮೀನುಗಳು ಸಾವನ್ನಪ್ಪಿವೆ. ಕೆರೆ ವಿಷಮಯವಾಗಿರುವುದರಿಂದ ಜನ ಜಾನುವಾರುಗಳು ಸಹ ಪ್ರಾಣಭೀತಿ ಎದುರಿಸುವಂತಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೀರಿನ ಮಾದರಿ ಪರೀಕ್ಷೆ ಕಳುಹಿಸಿದ್ದಾರೆ. ವರದಿ ಬಳಿಕ ಮೀನುಗಳ ಮರಣಕ್ಕೆ ಕಾರಣ ತಿಳಿದುಬರಲಿದೆ.

ಹೊಟ್ಟೆಕಿಚ್ಚಿಗೋ ಅಥವಾ ಇನ್ಯಾವುದೋ ಕಾರಣಕ್ಕೋ ಕೆರೆಯ ನೀರನ್ನು ಮಲೀನ ಮಾಡಿದ್ದಕ್ಕೆ ಮೀನುಗಳನ್ನು ನಂಬಿ ಬದುಕುತ್ತಿದ್ದವರಿಗೆ ಅನ್ಯಾಯವಾಗಿದೆ. ಘಟನೆ ಹಿನ್ನೆಲೆ ಮೀನುಗಾರರು ಪೊಲೀಸ್ ಠಾಣಾ ಮೆಟ್ಟಿಲು ಹತ್ತಲು ಸಿದ್ಧರಾಗಿದ್ದಾರೆ. ಜೊತೆಗೆ ಪರಿಹಾರ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *