ರೋಹಿಣಿ ಸಿಂಧೂರಿಯನ್ನು ಮೈಸೂರಿನ ಭೂ ಅಕ್ರಮದ ವಿಶೇಷ ತನಿಖಾಧಿಕಾರಿಯಾಗಿ ನೇಮಿಸಿ: ವಿಶ್ವನಾಥ್ ಆಗ್ರಹ

ಮೈಸೂರು: ಬೆಂಗಳೂರಿನಲ್ಲಿ ನಾಳೆ ಸಿಎಂ, ಸಿಎಸ್ ಭೇಟಿ ಮಾಡಿ ಮೈಸೂರು ಸುತ್ತಮುತ್ತ ನಡೆದಿದೆ ಎನ್ನಲಾಗುತ್ತಿರುವ ಭೂ ಹಗರಣದ ತನಿಖೆಗೆ ರೋಹಿಣಿ ಸಿಂಧೂರಿಯನ್ನು ವಿಶೇಷಾಧಿಕಾರಿಯಾಗಿ ನೇಮಿಸಲು ಮನವಿ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ.

ಚಾಮುಂಡಿಬೆಟ್ಟದ ಸುತ್ತಮುತ್ತ ಕೂಡ ಒತ್ತುವರಿಯಾಗಿದೆ. 6 ತಿಂಗಳ ಕಾಲ ಅವರನ್ನು ಇದರ ತನಿಖೆಗೆ ವಿಶೇಷಾಧಿಕಾರಿಯಾಗಿ ನೇಮಿಸಲು ಒತ್ತಾಯಿಸುತ್ತೇನೆ. ಡಿಸಿ ಚಪರಾಸಿ ಅಲ್ಲ ಡಿಸಿಯ ಬಗ್ಗೆ ಗೌರವದಿಂದ ಮಾತನಾಡಬೇಕು. ಕೊರೊನಾ ಓಡಿಸಿ ಅಂತ ಸಿಎಂ, ಪಿಎಂ ಕರೆ ನೀಡಿದ್ದರು. ಇವರೆಲ್ಲಾ ಸೇರಿ ಐಎಎಸ್ ಅಧಿಕಾರಿಗಳನ್ನು ಓಡಿಸುತ್ತಿದ್ದಾರೆ ಎಂದರು.

ಶಿಲ್ಪಾನಾಗ್ ಹೆಗಲ ಮೇಲೆ ಬಂದೂಕು ಇಟ್ಟು ರೋಹಿಣಿ ಸಿಂಧೂರಿಗೆ ಶೂಟ್ ಮಾಡಿದ್ದಾರೆ. ಮಾಜಿ ಸಚಿವರೊಬ್ಬರು ಹಾಸನದಿಂದ ಇಲ್ಲಿಗೆ ಬಂದು ಪ್ರೆಸ್‍ಮೀಟ್ ಮಾಡುತ್ತಾರೆ. ಹಾಗಾದರೆ ಮೈಸೂರಿನಲ್ಲಿ ಏನು ನಡೆಯುತ್ತಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ವರ್ಗಾವಣೆಗೂ ಎರಡು ದಿನ ಮುಂಚೆ ಒತ್ತುವರಿ ತೆರವು, ಭೂ ಅಕ್ರಮದ ತನಿಖೆಗೆ ಆದೇಶಿಸಿದ್ದ ರೋಹಿಣಿ ಸಿಂಧೂರಿ

ರಾಜಕಾಲುವೆ ಮೇಲೆ ಸಾರಾ ಕಲ್ಯಾಣ ಮಂಟಪ ನಿರ್ಮಾಣ ಆಗಿದೆ. ಒಂದು ಗುಂಟೆ ಅಲ್ಲ ಸಾವಿರಾರು ಎಕರೆ ಈ ರೀತಿ ಒತ್ತುವರಿ ಆಗಿದೆ. ಎಲ್ಲಾ ಜನಪ್ರತಿನಿಧಿಗಳು ಒಟ್ಟಾಗಿ ಸೇರಿ ಕೊರೊನಾ ಓಡಿಸುವ ಬದಲು ಅಧಿಕಾರಿ ಓಡಿಸಿದರು. ರೋಹಿಣಿ ಸಿಂಧೂರಿ, ಶಿಲ್ಪಾನಾಗ್ ಇಬ್ಬರು ಒಳ್ಳೆಯ ಅಧಿಕಾರಿಗಳು. ಇಬ್ಬರು ಐಎಎಸ್ ಅಧಿಕಾರಿಗಳನ್ನು ಹೊರ ಹಾಕಿದ್ದು ರಾಜಕಾರಣಿಗಳ ಸ್ವಾರ್ಥ ಎಂದರು. ಈಗ ರಿಯಲ್ ಎಸ್ಟೇಟ್ ಇಂಡಸ್ಟ್ರಿಯಾಗಿದೆ. ಸಾ ರಾ ಮಹೇಶ್ ಇಂಡಸ್ಟ್ರಿಲಿಯಸ್ಟ್ ಏನೂ ಅಲ್ಲ. ಮುಡಾ ಅಧ್ಯಕ್ಷ ಯಾವ ಇಂಡಸ್ಟ್ರಿ ಮಾಡಿದ್ದಾರೆ? ಎಷ್ಟು ಜನಕ್ಕೆ ಉದ್ಯೋಗ ನೀಡಿದ್ದಾರೆ ಎಂದು ಮತ್ತೆ ಪ್ರಶ್ನಿಸಿದರು.

ಶಿಲ್ಪಾನಾಗ್ ಇಲ್ಲಿ ಬಲಿಪಶುವಾಗಿದ್ದಾರೆ. ತಮ್ಮ ಉದ್ದೇಶದ ಬಗ್ಗೆ ಶಿಲ್ಪಾನಾಗ್ ಹೇಳಿದ್ದಾರೆ. ಮಿಷನ್ ಕಂಪ್ಲೀಟೆಡ್ ಎಂದು ಅವರೇ ಹೇಳಿದ್ದಾರೆ. ರೋಹಿಣಿ ಸಿಂಧೂರಿಯೆ ಮಿಷನ್ ಕಂಪ್ಲೀಟೆಡ್ಹಾ ಎಂದು ವಿಶ್ವನಾಥ್ ಪ್ರಶ್ನಿಸಿದರು.   ಇದನ್ನೂ ಓದಿ: ಡಿಸಿ ಮನೆ ಕರೆಂಟ್ ಬಿಲ್ ತಿಂಗಳಿಗೆ 50 ಸಾವಿರ ರೂ.: ಸಾರಾ ಮಹೇಶ್ ಆರೋಪ

Comments

Leave a Reply

Your email address will not be published. Required fields are marked *