ರೋಗಿಗಳೇ ಆಕ್ಸಿಜನ್ ಸಿಲಿಂಡರ್ ತಂದು ದಾಖಲಾಗಿ – ಆಸ್ಪತ್ರೆಗಳ ಕಂಡೀಷನ್

– ಚಿಕಿತ್ಸೆ ಮಧ್ಯೆ ಆಕ್ಸಿಜನ್ ಖಾಲಿಯಾದ್ರೆ ನೀವೇ ಜವಾಬ್ದಾರರು

ಭೋಪಾಲ್: ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಗರದಲ್ಲಿ ನೂರಕ್ಕೂ ಅಧಿಕ ಆಸ್ಪತ್ರೆಗಳು ಭರ್ತಿಯಾಗಿದ್ದು, ಆಕ್ಸಿಜನ್ ಸಮಸ್ಯೆ ತಲೆದೋರಿದೆ. ಸೋಂಕಿತರು ಸೇರಿದಂತೆ ಇನ್ನಿತರ ರೋಗಿಗಳಿಗೆ ಜೊತೆಯಲ್ಲಿ ಆಕ್ಸಿಜನ್ ಸಿಲಿಂಡರ್ ತರುವಂತೆ ಆಸ್ಪತ್ರೆ ಸಿಬ್ಬಂದಿ ಸೂಚಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಜಿಲ್ಲಾ ಆರೋಗ್ಯ ಸಹಾಯವಾಣಿಗೆ ಸುಮಾರು 500ಕ್ಕೂ ಹೆಚ್ಚು ಜನ ಆಕ್ಸಿಜನ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಸ್ಥಳೀಯ ಪತ್ರಿಕೆಯ ಈ ಕುರಿತು ಸುಮಾರು 25 ಆಸ್ಪತ್ರೆಗಳ ರಿಯಾಲಿಟಿ ಚೆಕ್ ನಡೆಸಿ, ಆಕ್ಸಿಜನ್ ಮತ್ತು ರೆಮ್‍ಡೆಸಿವಿರ್ ಕೊರತೆಯನ್ನ ಖಚಿತಪಡಿಸಿಕೊಂಡಿದೆ.

ಈ ನಡುವೆ ಆಸ್ಪತ್ರೆಯ ಭರ್ತಿ ಅರ್ಜಿಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಮತ್ತು ರೆಮ್‍ಡೆಸಿವರ್ ಕೊರತೆ ಇದೆ. ಒಂದು ವೇಳೆ ಚಿಕಿತ್ಸೆ ಮಧ್ಯೆ ಆಕ್ಸಿಜನ್ ಪೂರೈಕೆ ನಿಂತರೆ ಅದಕ್ಕೆ ಆಸ್ಪತ್ರೆ ಜವಾಬ್ದಾರರಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ.

ನಗರದ ಪರಿಸ್ಥಿತಿ ತುಂಬಾ ಅಪಾಯಕಾರಿಯಾಗಿದೆ. ಗಂಟೆಗಟ್ಟಲ್ಲೇ ಕ್ಯೂನಲ್ಲಿ ನಿಂತಾಗ ಆಕ್ಸಿಜನ್ ಸಿಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೇರೆಯವ ಜೀವದ ಜವಾಬ್ದಾರಿಯನ್ನ ತೆಗೆದುಕೊಳ್ಳಲು ಹೇಗೆ ಸಾಧ್ಯ? ನಮ್ಮ ರೀತಿ ನಗರದ ಅನೇಕ ಆಸ್ಪತ್ರೆಗಳು ಷರತ್ತುಗಳನ್ನ ಹಾಕುತ್ತಿವೆ. ಪ್ರತಿದಿನ ಸುಮಾರು 18 ರೋಗಿಗಳಿಗೆ 20 ರಿಂದ 25 ಆಕ್ಸಿಜನ್ ಸಿಲಿಂಡರ್ ಅವಶ್ಯಕತೆ ಇದೆ. ಆದ್ರೆ ನಮಗೆ 10 ರಿಂದ 12 ಸಿಲಿಂಡರ್ ಗಳು ಮಾತ್ರ ಸಿಗುತ್ತಿವೆ ಎಂದು ವೈದ್ಯ ಪಂಕಜ್ ಶರ್ಮಾ ಹೇಳುತ್ತಾರೆ.

Comments

Leave a Reply

Your email address will not be published. Required fields are marked *