ರೈಲ್ವೆ ಟಿಕೆಟ್ ಬುಕ್ ಮಾಡಿ, ಊಟಕ್ಕೆ ಹಣವಿಲ್ಲದೆ ಹಸಿವಿನಿಂದ ಪರದಾಡಿದ ಕಾರ್ಮಿಕರು

ಯಾದಗಿರಿ: ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ತಮ್ಮ ರಾಜ್ಯಕ್ಕೆ ತೆರಳಲು ರೈಲ್ವೆ ಟಿಕೆಟ್ ಬುಕ್ ಮಾಡಿದ ಮಧ್ಯಪ್ರದೇಶ ಕಾರ್ಮಿಕರು ಕೈಯಲ್ಲಿ ಊಟಕ್ಕೂ ಹಣವಿಲ್ಲದೆ ಹಸಿವಿನಿಂದ ರಾತ್ರಿಯಿಡಿ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಮಲಗಿ ಕಾಲ ಕಳೆದ ಘಟನೆ ನಡೆದಿದೆ.

ಜಿಲ್ಲೆಯ ಸೈದಾಪುರದಲ್ಲಿನ ರಸ್ತೆ ಕಾಮಗಾರಿ ಕೆಲಸಕ್ಕೆಂದು ಮಧ್ಯಪ್ರದೇಶದಿಂದ ಕಾರ್ಮಿಕರು ಗುಳೆ ಬಂದಿದ್ದಾರೆ. ಈಗ ರಾಜ್ಯದಲ್ಲಿ ಕೊರೊನ ಲಾಕ್‍ಡೌನ್ ಘೋಷಣೆ ಹಿನ್ನೆಲೆ ಮರಳಿ ಮಧ್ಯಪ್ರದೇಶಕ್ಕೆ ತೆರಳಲು ಮುಂದಾಗಿದ್ದಾರೆ. ಕಾರ್ಮಿಕರಿಗೆ ಊರಿಗೆ ತೆರಳಲು ರಸ್ತೆ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ಹೆಚ್ಚಿನ ಹಣ ನೀಡಿಲ್ಲ. ರೈಲ್ವೆ ಟಿಕೆಟ್‍ಅನ್ನು  ತತ್ಕಾಲ್‌ನಲ್ಲಿ ಮಾಡಿಸಿಕೊಳ್ಳಬೇಕಾಗಿದೆ.

ಕಾರ್ಮಿಕರು ತಮ್ಮ ಬಳಿ ಇರುವ ಎಲ್ಲಾ ಹಣದಲ್ಲಿ ಊರಿಗೆ ಹೋಗಲು ದಾರಿ ಮಾಡಿಕೊಂಡು ಊಟಕ್ಕೆ ಕೈಯಲ್ಲಿ ಹಣವಿಲ್ಲದೆ ರೈಲ್ವೆ ನಿಲ್ದಾಣದಲ್ಲಿ ಹಸಿವಿನಿಂದ ರಾತ್ರಿಯಿಡಿ ಬಳಲಿದ್ದಾರೆ. ಈ ಕುರಿತಾಗಿ ತಡವಾಗಿ ತಿಳಿದಕೊಂಡ ಕಾರ್ಮಿಕರ ಇಲಾಖೆ ಅಧಿಕಾರಿಗಳ ರೈಲ್ವೆ ನಿಲ್ದಾಣಕ್ಕೆ ತೆರಳಿ ಕಾರ್ಮಿಕರ ರಕ್ಷಣೆ ಮುಂದಾಗಿದ್ದಾರೆ.

ಅಧಿಕಾರಿಗಳು ರೈಲ್ವೆ ನಿಲ್ದಾಣಕ್ಕೆ ತೆರಳುವ ಮೊದಲೇ  ಟ್ರೈನ್ ಬಂದ ಹಿನ್ನೆಲೆ ಕಾರ್ಮಿಕರು ಮಧ್ಯಪ್ರದೇಶದತ್ತ ಪ್ರಯಾಣವನ್ನು ಬೆಳಿಸಿದ್ದರು. ಅಧಿಕಾರಿಗಳು ಸದ್ಯ ಕಾರ್ಮಿಕರ ಮಾಹಿತಿ ಕಲೆಹಾಕುತ್ತಿದ್ದಾರೆ. ಮತ್ತೊಂದು ಕಡೆ ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *