ರೆಸಾರ್ಟ್‍ನಲ್ಲಿ ಅತೃಪ್ತ ಶಾಸಕರ ರಹಸ್ಯ ಸಭೆ- ಸುದ್ದಿಯಾಗುತ್ತಿದ್ದಂತೆ ಕಾಲ್ಕಿತ್ತ ಯೋಗೇಶ್ವರ್

– ಏತನೀರಾವರಿ ಕುರಿತು ಚರ್ಚಿಸಲು ಸಭೆ ನಡೆಸಿದ್ದೇವೆಂದ ಜಾರಕಿಹೊಳಿ

ಚಿಕ್ಕಮಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಶುರುವಾಯಿತಾ ಸಂಚಲನ ಎಂಬ ಪ್ರಶ್ನೆ ಇದೀಗ ಮೂಡಿದ್ದು, ರೆಸಾರ್ಟ್ ರಾಜಕಾರಣ ಮತ್ತೆ ಗರಿಗೆದರಿದೆ. ಚಿಕ್ಕಮಗಳೂರಿನ ರೆಸಾರ್ಟ್‍ನಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಗೌಪ್ಯ ಸಭೆ ನಡೆಸಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಏತನೀರಾವರಿ ಕುರಿತು ಚರ್ಚಿಸಲು ಸಭೆ ನಡೆಸಿದ್ದೇವೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹಾರಿಕೆ ಉತ್ತರ ನೀಡಿದ್ದಾರೆ.

ಚಿಕ್ಕಮಗಳೂರು ಹೊರವಲಯದ ಸರಾಯ್ ರೆಸಾರ್ಟ್‍ನಲ್ಲಿ ಅತೃಪ್ತರ ಸಭೆ ನಡೆದಿದ್ದು, ರಮೇಶ್ ಜಾರಕಿಹೊಳಿ, ಸಿ.ಪಿ.ಯೋಗೇಶ್ವರ್, ಗೋಪಾಲಯ್ಯ, ಶಾಸಕ ಎಂ.ಪಿ.ಕುಮಾರಸ್ವಾಮಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ನಾಯಕರು ನಿನ್ನೆ ರಾತ್ರಿಯೇ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಹೀಗಾಗಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿದ್ದ ಸಚಿವ ರಮೇಶ್ ಜಾರಕಿಹೊಳಿಯಿಂದಲೇ ಸರ್ಕಾರ ಬೀಳಿಸುವ ಪ್ರಯತ್ನ ನಡೆದಿದೆಯಾ ಎಂಬ ಪ್ರಶ್ನೆ ಇದೀಗ ಎದ್ದಿದೆ.

ಸಭೆ ನಡೆಸಿದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ಎತ್ತಿನಹೊಳೆ ಏತನೀರಾವರಿ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ್ದೇವೆ. ನಿನ್ನೆ ನಡೆದ ಕಾಮಗಾರಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ನಾವು ಸಭೆ ನಡೆಸುವ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿಲ್ಲ. ಕೇವಲ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

ಸುದ್ದಿ ಪ್ರಸಾರವಾಗುತ್ತಲೇ ಸಚಿವ ಸಿ.ಪಿ.ಯೋಗೇಶ್ವರ್ ರೆಸಾರ್ಟ್ ನಿಂದ ಹೊರನಡೆದಿದ್ದಾರೆ. ನಿನ್ನೆಯಿಂದಲೂ ನಾಯಕರು ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದು, ನಿರ್ದಿಷ್ಟ ಖಾತೆಗಳಿಗಾಗಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಚೌಕಾಸಿ ಸಭೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *