ರೂಪಾಂತರಗೊಂಡಿರುವ ವೈರಸ್ ವೇಗವಾಗಿ ಹಬ್ಬುತ್ತೆ: ಲಂಡನ್ ವೈದ್ಯ ಡಾ.ಚಿರನ್

ಬೆಂಗಳೂರು: ಕೊರೊನಾ ರೂಪಾಂತರದ ಪ್ರಕರಣಗಳು ಸೆಪ್ಟಂಬರ್‍ನಲ್ಲಿ ಮೊದಲು ಲಂಡನ್‍ನಲ್ಲಿ ಕಾಣಿಸಿಕೊಂಡಿದ್ದು, ಈಗಿರುವ ಕೊರೊನಾ ವೈರಸ್‍ಗಿಂತ ಬಹುಬೇಗ ಹರಡುತ್ತಿದೆ ಎಂದು ಲಂಡನಲ್ಲಿರುವ ಮೈಸೂರು ಮೂಲದ ವೈದ್ಯ ಡಾ.ಚಿರನ್ ಕೃಷ್ಣಸ್ವಾಮಿ ತಿಳಿಸಿದರು.

ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ತುಂಬಾ ವೇಗವಾಗಿ ಹರಡುತ್ತಿದೆ. ಈ ಹಿಂದಿನ ಕೊರೊನಾ ವೈರಸ್‍ಗಿಂತ ರೂಪಾಂತರವಾಗಿರುವ ವೈರಸ್ ಹೆಚ್ಚು ಕಾಡುತ್ತಿದೆ. ಇಂಗ್ಲೆಂಡ್‍ನಲ್ಲಿ ಸೋಮವಾರ 33 ಸಾವಿರ ಪಾಸಿಟಿವ್ ಕೇಸ್ ಬಂದಿವೆ. ಇದಕ್ಕೂ ಮೊದಲು ಕೇವಲ 5-10 ಸಾವಿರ ಕೊರೊನಾ ಪ್ರಕರಣಗಳು ಕಂಡುಬರುತ್ತಿದ್ದವು ಎಂದು ವಿವರಿಸಿದರು.

ಮೂಲದಲ್ಲಿ ಬಂದ ಕೊರೊನಾ ವೈರಸ್‍ಗೆ ಹೋಲಿಸಿದರೆ ಈಗ ರೂಪಾಂತರಗೊಂಡಿರುವ ವೈರಸ್ ತುಂಬಾ ಪ್ರಬಲವಾಗಿದೆ. 17 ಪ್ರೊಟೀನ್‍ಗಳ ವ್ಯತ್ಯಾಸವಿದೆ. ಹೀಗಾಗಿ ಹೆಚ್ಚು ಆತಂಕ ಸೃಷ್ಟಿಸಿದೆ ಎಂದು ವೈದ್ಯರು ತಿಳಿಸಿದರು.

ಇಂಗ್ಲೆಂಡ್ ಸರ್ಕಾರ ಸಹ ಲಾಕ್‍ಡೌನ್ ಮೂಲಕ ಕ್ರಮ ಕೈಗೊಳ್ಳಲು ಮುಂದಾಗಿದೆ. ನಾಲ್ಕು ಭಾಗಗಳಾಗಿ ವಿಂಗಡಿಸಿ ಲಾಕ್‍ಡೌನ್ ಮಾಡಲಾಗಿದ್ದು, ಟಯರ್ 4ರಲ್ಲಿ ತುಂಬಾ ಕಟ್ಟುನಿಟ್ಟಿನ ಲಾಕ್‍ಡೌನ್ ವಿಧಿಸಲಾಗಿದೆ. ಲಂಡನ್ ಸುತ್ತಲಿನ ಜಾಗ ಟಯರ್ 4ರಲ್ಲಿದೆ. ಮಧ್ಯ ಹಾಗೂ ಉತ್ತರ ಭಾಗದ ಇಂಗ್ಲೆಂಡ್‍ನಲ್ಲಿ ಟಯರ್ 1,2,3 ಯಾಗಿ ಬೇರ್ಪಡಿಸಿ ಲಾಕ್‍ಡೌನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮೂಲ ಕೊರೊನಾ ವೈರಸ್ ಲಕ್ಷಣಕ್ಕೂ ಇದಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಆದರೆ ಈ ಹಿಂದಿನದ್ದಕ್ಕಿಂತ ಇದು ಬಹುಬೇಗ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ಕೊರೊನಾ ರೋಗಿಗಳಿಗೆ ನೀಡಿದ ಚಿಕಿತ್ಸೆ ರೀತಿಯಲ್ಲೇ ರೂಪಾಂತರ ಹೊಂದಿದ ವೈರಸ್‍ನ ರೋಗಿಗಳಿಗೂ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಕಟ್ಟುನಿಟ್ಟಿನ ಲಾಕ್‍ಡೌನ್ ಮಾತ್ರವಲ್ಲದೆ, ಟೆಸ್ಟಿಂಗ್ ಹಾಗೂ ಸ್ಕ್ರೀನಿಂಗ್ ಬಿಗಿಗೊಳಿಸಲಾಗಿದೆ. ಲಂಡನ್ ಏರಿಯಾದಲ್ಲಿ ಟಯರ್ 4 ಲಾಕ್‍ಡೌನ್ ವಿಧಿಸಿ ನಿರ್ಬಂಧ ಹೇರಲಾಗಿದೆ. ಪ್ರತಿ ದಿನ 1 ಲಕ್ಷಕ್ಕೂ ಅಧಿಕ ಜನರನ್ನು ಟೆಸ್ಟಿಂಗ್ ಮಾಡಲಾಗುತ್ತಿದೆ. ಇದರಲ್ಲಿ ಸೋಮವಾರ 33 ಸಾವಿರ ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು.

ಲಂಡನ್‍ನಲ್ಲಿ ಕೊರೊನಾ ಲಸಿಕೆ ನೀಡುವುದನ್ನು ಪ್ರಾರಂಭಿಸಿ 10 ದಿನಗಳಾಗಿವೆ. ಮೊದಲ ದಿನ 80 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ. ವೈರಸ್‍ನಲ್ಲಿ ಸಣ್ಣ ಬದಲಾವಣೆಯಾಗಿದ್ದರಿಂದ ಲಸಿಕೆ ಕೆಲಸ ಮಾಡುವುದಿಲ್ಲ ಎಂಬ ಪರಿಸ್ಥಿತಿ ಉದ್ಭವಿಸುವುದಿಲ್ಲ. ಈ ವೈರಸ್ ಬೇಗ ಹರಡಲು ಚಳಿಗಾಲವೂ ಕಾರಣವಿರಬಹುದು. ತುಂಬಾ ಬೇಗ ಟೆಸ್ಟ್, ಟ್ರೇಸಿಂಗ್, ಟ್ರ್ಯಾಕಿಂಗ್ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಡಿ.15ರಿಂದ ಹೊರಗಡೆಯಿಂದ ಬಂದವರು 15 ದಿನಗಳ ಕಾಲ ಕ್ವಾರಂಟೈನ್ ಆಗಲೇಬೇಕು. ಬಳಿಕ ಅವರ ಸ್ವಂತ ಖರ್ಚಿನಲ್ಲೇ ಆರ್‍ಟಿಪಿಸಿಆರ್ ಟೆಸ್ಟ್ ಮಾಡಿಸಿ ಬಳಿಕ ಕೆಲಸಕ್ಕೆ ತರಳಬಹುದು. ತುಂಬಾ ಸೂಕ್ಷ್ಮವಾಗಿ ನಿರ್ವಹಿಸುತ್ತಿರುವುದರಿಂದ ಇದು ಬೇಗ ಬೆಳಕಿಗೆ ಬಂದಿದೆ ಎಂದರು.

Comments

Leave a Reply

Your email address will not be published. Required fields are marked *