“ರೀಡೂ” ಪದದ ಜನಕ ಯಾರು ಸಿದ್ದರಾಮಯ್ಯನವರೆ- ಸಚಿವ ಸಿ.ಟಿ.ರವಿ ಪ್ರಶ್ನೆ

– ಡಿಕೆಶಿ-ಸಿದ್ದು ಮಧ್ಯೆ ಪ್ರಚಾರದ ಕಾಂಪಿಟೇಷನ್

ಚಿಕ್ಕಮಗಳೂರು: ಪುನರ್ ಪರಿಶೀಲನೆ (ರೀಡೂ)  ಎಂಬ ಹೊಸ ಪರಿಭಾಷೆಯ ಜನಕ ಯಾರು ಸಿದ್ದರಾಮಯ್ಯನವರೇ, ಡಿನೋಟಿಫಿಕೇಶ್‍ನಲ್ಲಿ “ರೀಡೂ” ಹುಟ್ಟುಹಾಕಿ 600-700 ಎಕರೆ ಡಿನೋಟಿಫಿಕೇಶನ್ ಮಾಡಿದ್ದಕ್ಕೆ ಇಂದಿಗೂ ಉತ್ತರ ಸಿಕ್ಕಿಲ್ಲ, ಉತ್ತರ ಹೇಳಬೇಕಾದವರೇ ಇಂದು ಪ್ರಶ್ನೆ ಕೇಳುತ್ತಿದ್ದಾರೆ ಎಂದು ಸಚಿವ ಸಿ.ಟಿ.ರವಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಕೋವಿಡ್-19 ಪರಿಸ್ಥಿತಿ ಕುರಿತು ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಕೋವಿಡ್-19 ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಕಿಡಿಕಾರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಆಲೋಚಿಸೋದು ಕೂಡ ತಪ್ಪು. ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿದ್ದರೆ ನೀಡಿ. ಇಲ್ಲವಾದಲ್ಲಿ ಎಲುಬಿಲ್ಲದ ನಾಲಿಗೆ ಏನ್ನನ್ನು ಬೇಕಾದರೂ ಹೇಳುತ್ತೆ ಎಂಬುದು ಸಿದ್ದರಾಮಯ್ಯನವರಿಗೆ ಅನ್ವಯ ಆಗಬಾರದು. ಅವರು ಸಿಎಂ ಆಗಿದ್ದವರು. ದಾಖಲೆ ಇದ್ದರೆ ನೀಡಿ ಎಂದು ಸವಾಲು ಹಾಕಿದರು.

ಆಧಾರ ಇದ್ದರೆ ಭಯ ಯಾಕೆ, ಆಧಾರ ಇಲ್ಲದೆ ಆರೋಪ ಮಾಡಿದರೆ ಮಾತ್ರ ಭಯಪಡಬೇಕು. ಅವರದ್ದು ಆಧಾರ ರಹಿತ ಆರೋಪವಾಗಿದ್ದರೆ ಕೋರ್ಟಿಗೂ ಹೆದರಬೇಕು. ಲೀಗಲ್ ನೋಟಿಸ್ ಗೂ ಹೆದರಬೇಕು. ಆರೋಪವನ್ನು ಯಾರ ಮೇಲಾದರೂ ಮಾಡಬಹುದು. ಅದಕ್ಕೆ ಆಧಾರ ಒದಗಿಸಬೇಕು. ಇವರ ಬಳಿ ಆಧಾರ ಇದ್ದರೆ ಲೋಕಾಯುಕ್ತಕ್ಕೆ ಕೊಡಲಿ, ಕೋರ್ಟಿಗೆ ಸಲ್ಲಿಸಲಿ, ಪಿಐಎಲ್ ಹಾಕಲಿ ಎಂದು ಸಿದ್ದರಾಮಯ್ಯನವರಿಗೆ ಸಲಹೆ ನೀಡಿದ್ದಾರೆ.

ಎರಡು ಸಾವಿರ ಕೋಟಿ ರೂ. ಅವ್ಯವಹಾರ ಆಗಿದೆ ಎಂದಿದ್ದಾರೆ. ಖರ್ಚಾಗಿರೋದೇ 2 ಸಾವಿರ ಕೋಟಿ ರೂ. ಲೂಟಿ ಎಲ್ಲಾಗುತ್ತೆ ಎಂದು ಸರ್ಕಾರದ ಐವರು ಮಂತ್ರಿಗಳು ಉತ್ತರ ಕೊಟ್ಟಿದ್ದೇವೆ. ನಮ್ಮ ಉತ್ತರದ ಬಗ್ಗೆ ಅವರಿಗೆ ತೃಪ್ತಿ ಇಲ್ಲದಿದ್ದರೆ, ಅವರಿಗಿರುವ ದಾಖಲೆಗಳನ್ನು ಲೋಕಾಯುಕ್ತಕ್ಕೆ ನೀಡಿ, ದೂರು ಸಲ್ಲಿಸಬಹುದು. ಆದರೆ ಇದುವರೆಗೂ ಸಲ್ಲಿಸಿಲ್ಲ. ಕೋರ್ಟ್ ಗೂ ಹೋಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಪಬ್ಲಿಕ್ ಅಕೌಂಟ್ಸ್ ಕಮಿಟಿ ಏನು ದಾಖಲೆ ಕೊಡಬೇಕೋ ಅದನ್ನು ಕೊಟ್ಟಿದೆ. ಪಬ್ಲಿಕ್ ಅಕೌಂಟ್ಸ್ ಕಮಿಟಿ ತೀರ್ಮಾನ ಹೇಳುವ ಮುನ್ನವೇ ಊರು ತುಂಬಾ ಆರೋಪ ಮಾಡುತ್ತಿರುವುದನ್ನು ಗಮನಿಸಿದರೆ, ಇವರಿಗೆ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ ಎಂದಾಗುತ್ತದೆ. ಇಲ್ಲವೆ ಕಾಂಗ್ರೆಸ್ ನೊಳಗೆ ಇಂಟರ್ನನಲ್ ಕಾಂಪಿಟೇಷನ್ ನಡೆಯುತ್ತಿರಬಹುದು. ಡಿಕೆಶಿ ಹಾಗೂ ಸಿದ್ದು ಮಧ್ಯೆ ಅವರಿಗಿಂತ ನಾನು ಮುಂದಿರಬೇಕೆಂದು ಪ್ರಚಾರ ತೆಗೆದುಕೊಳ್ಳಲು ಸ್ಪರ್ಧೆ ನಡೆಯುತ್ತಿರಬಹುದು ಎಂದು ಮಾತಿನ ಮೂಲಕ ತಿವಿದಿದ್ದಾರೆ.

Comments

Leave a Reply

Your email address will not be published. Required fields are marked *