ರಾಷ್ಟ್ರ ಮಟ್ಟದಲ್ಲಿ ಕಿತ್ತಾಟ, ಪಟ್ಟಣ ಪಂಚಾಯತ್‍ನಲ್ಲಿ ಮೈತ್ರಿ – ಗದ್ದುಗೆ ಹಿಡಿದ ಕೈ, ಕಮಲ

ಚಾಮರಾಜನಗರ: ರಾಜ್ಯ ಹಾಗೂ ರಾಷ್ಟ್ರದಲ್ಲಿ ಕಿತ್ತಾಡುತ್ತಿರುವ ಬಿಜೆಪಿ ಕಾಂಗ್ರೆಸ್ ಪಕ್ಷಗಳು ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಅಚ್ಚರಿ ಮೂಡಿಸಿವೆ. ಅತಿ ಹೆಚ್ಚು ಸ್ಥಾನಗಳಿಸಿದ್ದ ಜೆಡಿಎಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಹಿಡಿದಿವೆ.

ಒಟ್ಟು 13 ಸದಸ್ಯ ಬಲದ ಹನೂರು ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಜೆ.ಡಿ.ಎಸ್ 6, ಕಾಂಗ್ರೆಸ್ 4 ಹಾಗೂ ಬಿಜೆಪಿ ಮೂರು ಸ್ಥಾನ ಗೆದಿದ್ದವು. ಹೀಗಾಗಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಆದರೆ ಆರು ಸ್ಥಾನಗಳಿಸುವ ಮೂಲಕ ಜೆಡಿಎಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಈ ನಡುವೆ ಬಿಜೆಪಿಯ ಓರ್ವ ಸದಸ್ಯ ಮೃತಪಟ್ಟಿದ್ದರಿಂದ ಒಂದು ಸ್ಥಾನ ಖಾಲಿಯಾಗಿ ಬಿಜೆಪಿ ಎರಡು ಸ್ಥಾನ ಮಾತ್ರ ಹೊಂದಿತ್ತು.

 

ಇಂದು ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ಮೈತ್ರಿ ಮಾಡಿಕೊಂಡು ಅಧ್ಯಕ್ಷ ಸ್ಥಾನಕ್ಕೆ ಮೈತ್ರಿಕೂಟದಿಂದ ಬಿಜೆಪಿಯ ಚಂದ್ರಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನ ಹರೀಶ್ ಕುಮಾರ್ ಸ್ಪರ್ಧಿಸಿದ್ದರು. ಹಾಗೆಯೇ ಜೆಡಿಎಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಜಮಮ್ತಾಜ್ ಬಾನು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆನಂದ ಕುಮಾರ್ ಕಣಕ್ಕಿಳಿದಿದ್ದರು. ಸ್ವತಃ ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್ ಹಾಗೂ ಹನೂರು ಕಾಂಗ್ರೆಸ್ ಶಾಸಕ ಆರ್.ನರೇಂದ್ರ ಕೈಜೋಡಿಸುವ ಮೂಲಕ ಮೈತ್ರಿಕೂಟದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು.

ಅಭ್ಯರ್ಥಿಗಳು ಗೆಲ್ಲಲು 8 ಸದಸ್ಯರ ಬೆಂಬಲ ಬೇಕಾಗಿತ್ತು. ಸಂಸದ ಹಾಗೂ ಶಾಸಕರ ಮತ ಸೇರಿ ಬಿಜೆಪಿ ಕಾಂಗ್ರೆಸ್ ಮೈತ್ರಿಕೂಟಕ್ಕೆ 8 ಮತ ಲಭಿಸುವುದರೊಂದಿಗೆ ಅಧ್ಯಕ್ಷರಾಗಿ ಬಿಜೆಪಿಯ ಚಂದ್ರಮ್ಮ, ಉಪಾಧ್ಯಕ್ಷರಾಗಿ ಕಾಂಗ್ರೆಸ್ಸಿನ ಹರೀಶ್ ಕುಮಾರ್ ಆಯ್ಕೆಯಾದರು. ಜೆಡಿಎಸ್ ಅಭ್ಯರ್ಥಿಗಳಿಗೆ ತಲಾ 6 ಮತ ಲಭಿಸಿ ಸೋಲು ಅನುಭವಿಸಬೇಕಾಯ್ತು. ಹನೂರು ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಸ್ಥಳೀಯವಾಗಿ ಬಿಜೆಪಿ ಕಾಂಗ್ರೆಸ್ ಮೈತ್ರಿ ಅನಿವಾರ್ಯವಾಗಿತ್ತು ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್ ಮೈತ್ರಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನೇ ದೊಡ್ಡ ವಿಷಯವನ್ನಾಗಿ ಮಾಡುವುದು ಬೇಡ, ಹಿಂದೆ ಕೇಂದ್ರದಲ್ಲಿ ಎನ್.ಡಿ.ಎ. ಸರ್ಕಾರಕ್ಕೆ ಫಾರೂಕ್ ಅಬ್ದುಲ್ಲಾ, ಕರುಣಾನಿಧಿ, ಮಮತಾಬ್ಯಾನರ್ಜಿ ಅಂತಹವರೇ ಕೈ ಜೋಡಿಸಿದ್ದರು. ಹಾಗಾಗಿ ಸ್ಥಳೀಯ ಮೈತ್ರಿ ಬಗ್ಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಅವರು ವಿ.ಶ್ರೀನಿವಾಸಪ್ರಸಾದ್ ಹೇಳಿದ್ದಾರೆ. ಜೊತೆಗೆ ನನ್ನ ಬೆಳವಣಿಗೆ ಸಹಿಸಲಾಗದೆ ಹಾಗೂ ನನ್ನನ್ನು ರಾಜಕೀಯವಾಗಿ ಮುಗಿಸಲು ಈ ಎರಡೂ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡಿವೆ ಜೆ.ಡಿ.ಎಸ್.ಮುಖಂಡ ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *