ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸುವಂತೆ ಪ್ರಧಾನಿಗೆ ಕಪಿಲ್ ಸಿಬಲ್ ಮನವಿ

ನವದೆಹಲಿ: ದೇಶದಲ್ಲಿ ಪ್ರಾರಂಭವಾಗಿರುವ ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಹಾಗಾಗಿ ಭಾರತದಲ್ಲಿ ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸುವಂತೆ ಪ್ರಧಾನಿ ಮೋದಿ ಅವರಿಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಅವರು ಮನವಿ ಮಾಡಿಕೊಂಡಿದ್ದಾರೆ.

ಇದರೊಂದಿಗೆ ದೇಶದಲ್ಲಿ ನಡೆಯುತ್ತಿರುವ ಚುನಾವಣಾ ರ‍್ಯಾಲಿಗಳಿಗೆ ಕಡಿವಾಣ ಹಾಕುವಂತೆ ಚುನಾವಣಾ ಆಯೋಗಕ್ಕೂ ಕೋರಿಕೆಯೊಂದನ್ನು ಇಟ್ಟಿದ್ದಾರೆ. ಈಗಾಗಲೇ ಪಂಚ ರಾಜ್ಯಗಳ ಚುನಾವಣೆ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ 8 ಹಂತದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಈಗಾಗಲೇ 5 ಹಂತ ಮುಗಿದಿದ್ದು, ಇನ್ನು ಕೊನೆಯ 3 ಹಂತದ ಚುನಾವಣೆ ಬಾಕಿ ಇದೆ. ಹಾಗಾಗಿ ಅಲ್ಲಿ ನಡೆಯಲಿರುವ ಮುಂದಿನ ಚುನಾವಣಾ ರ‍್ಯಾಲಿಗಳನ್ನು ತಡೆಯುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಟ್ವಿಟ್ಟರ್‍ನಲ್ಲಿ ಬರೆದುಕೊಂಡಿರುವ ಕಪಿಲ್ ಸಿಬಲ್, ಮೋದಿಜಿ ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ, ಚುನಾವಣಾ ಆಯೋಗ ಚುನಾವಣಾ ರ‍್ಯಾಲಿಗಳನ್ನು ತಡೆ ಹಿಡಿಯಿರಿ, ಕೋರ್ಟ್ ಜನರ ಪ್ರಾಣವನ್ನು ಉಳಿಸಲು ಪ್ರಯತ್ನ ಮಾಡಲಿ ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ.

ಕಳೆದ ಒಂದು ದಿನದಲ್ಲಿ ದೇಶದಲ್ಲಿ ಬರೋಬ್ಬರಿ 2,61,500 ಕೊರೊನಾ ಪ್ರಕರಣಗಳು ದೃಢಪಟ್ಟಿತ್ತು. ಹಾಗೆ ಕಳೆದ ನಾಲ್ಕು ದಿನದಿಂದ ದೇಶದಲ್ಲಿ 2 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿರುವುದು ಆತಂಕ ಮೂಡಿಸಿದೆ.

Comments

Leave a Reply

Your email address will not be published. Required fields are marked *