ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಮುಚ್ಚುವುದೇ ಒಳ್ಳೆಯದು- ಕೇಂದ್ರದ ವಿರುದ್ಧ ರೇವಣ್ಣ ಕಿಡಿ

ಹಾಸನ: ರಾಷ್ಟ್ರೀಕೃತ ಬ್ಯಾಂಕ್‍ಗಳು ರೈತರಿಗೆ ಹಣ ಕೊಡುತ್ತಿಲ್ಲ, ಹೀಗಾಗಿ ಅವುಗಳನ್ನು ಮುಚ್ಚುವುದು ಒಳ್ಳೆಯದು ಎಂದು ಮಾಜಿ ಸಚಿವ ಎಚ್‍ಡಿ ರೇವಣ್ಣ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ರೈತರಿಗೆ ಗೋಳು ಕೊಡುವ ಬ್ಯಾಂಕ್ ಎಂದರೆ ಅದು ರಾಷ್ಟ್ರೀಕೃತ ಬ್ಯಾಂಕ್‍ಗಳು. ಈ ರಾಷ್ಟ್ರೀಕೃತ ಬ್ಯಾಂಕ್‍ಗಳು ಬಡ ರೈತರಿಗೆ ಸಾಲ ಕೊಡುತ್ತಿಲ್ಲ. ರೈತರು ಒಂದು ಲಕ್ಷ ರೂ. ಸಾಲ ತೆಗೆದುಕೊಂಡರೇ ಒಂದು ವರ್ಷಕ್ಕೆ 5 ಲಕ್ಷ ರೂ. ಹಣ ಕಟ್ಟಿ ಎಂದು ಹೇಳುತ್ತಾರೆ. ಈ ಬ್ಯಾಂಕ್ ಗಳು ಉಳ್ಳವರಿಗೆ ಮಾತ್ರ ಉಪಯೋಗವಿದೆ. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರು ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಮುಚ್ಚಲಿ ಎಂದು ಒತ್ತಾಯ ಮಾಡಿದರು.

ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ರೈತರ ಮನೆ ಹಾಳಾಗುತ್ತಿದೆ. ಮೋದಿಯವರೇ ನೀವೇ ಹೇಳಿ ಈ ಬ್ಯಾಂಕ್‍ಗಳು ಯಾಕೆ ಇದೆ ಎಂದು. ಈ ಬ್ಯಾಂಕ್‍ಗಳಿಂದ ಉಳ್ಳವರೆಗೆ ಸಾಲ ಕೊಡುತ್ತೇವೆ ಎಂದು ಒಂದು ಆದೇಶ ಹೊರಡಿಸಿ ಎಂದು ಕೇಂದ್ರ ಸರ್ಕಾರದ ವಿರುದ್ಧ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾದಿಂದ 4,200 ಟನ್ ಹಾಲಿನ ಪೌಡರ್ ಮಾರಾಟವಾಗದೇ ಡೈರಿಯಲ್ಲೇ ಉಳಿದಿದೆ. ಕೊರೊನಾ ಸಮಯದಲ್ಲಿ ವಿವಿಧ ಬೆಳೆಗಳಲ್ಲಿ ನಷ್ಟ ಅನುಭವಿಸಿದ್ದು ಹಾಗೂ ಕೆ.ಎಂ.ಎಫ್. ಮೂಲಕವೇ ಜೋಳ ಖರೀದಿ ಮಾಡಲು ಮುಂದಾಗಬೇಕು. ಈ ನಿಟ್ಟಿನಲ್ಲಿ ರೈತರ ನೆರವಿಗೆ ಸರ್ಕಾರ ಬರಬೇಕು. ಲಾಕ್‍ಡೌನ್ ಮಾಡಿದ ಹಿನ್ನೆಲೆಯಲ್ಲಿ ಹಣ್ಣು, ಹೂವು, ತರಕಾರಿ ಬೆಳೆಗಳು ಸೇರಿ ಅಂದಾಜು 104 ಕೋಟಿ ರೂ.ಗಳ ನಷ್ಟವಾಗಿದೆ. ಜೊತೆಗೆ ಮಳೆ ಹಾನಿಗೂ ಇದುವರೆಗೂ ಯಾವ ಪರಿಹಾರವನ್ನು ಸರ್ಕಾರ ನೀಡಿಲ್ಲ. ತೋಟಗಾರಿಕ ಬೆಳೆಗಳಲ್ಲಿ ಸಮೀಕ್ಷೆ ಪ್ರಕಾರ ಆಗಸ್ಟ್ ತಿಂಗಳ ಒಳಗೆ 19,23,37,000 ರೂ ನಷ್ಟವಾಗಿದೆ. ಕಾಫಿ ಬೆಳೆಯಲ್ಲಿ 18,10,57,000 ರೂ. ನಷ್ಟ ಸಂಭವಿಸಿದೆ ಎಂದು ವಿವರಿಸಿದರು.

ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು, ಮಳೆ ಹಾನಿ ಸೇರಿದಂತೆ ಇತರೆ ಪ್ರಕೃತಿ ವಿಕೋಪದ ಕಾರಣ ಕಾಫಿ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಪರಿಹಾರ ಒದಗಿಸಲಿ. ಜಿಲ್ಲೆಯ ಹೂವಿನ ಬೆಳೆಗಾರರಿಗೆ ಇದುವರೆಗೆ 7 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಗಿದೆ. ಅಲ್ಲದೆ ಬ್ಯಾಂಕ್ ಖಾತೆಯೂ ಸರಿ ಇಲ್ಲ ಎಂಬ ಕಾರಣಕ್ಕೆ ಹಲವರಿಗೆ ಪರಿಹಾರ ತಲುಪಿಲ್ಲ ಎಂದರು.

ಜಿಲ್ಲೆಯಲ್ಲಿ ಈ ಬಾರಿ ಸುಮಾರು 78 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯುವ ನಿರೀಕ್ಷೆ ಇತ್ತು. ಆದರೆ 95 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದಾರೆ. 6 ಲಕ್ಷ ಮೆಟ್ರಿಕ್ ಟನ್ ಮೆಕ್ಕೆ ಜೋಳದ ಇಳುವರಿ ಬರುವ ನಿರೀಕ್ಷೆ ಇದ್ದು, ಇವರಿಗೆ ಬೆಂಬಲ ಬೆಲೆ ನೀಡಬೇಕು. ಒಟ್ಟು 6 ಲಕ್ಷ ಟನ್ ಜೋಳವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖರೀದಿ ಮಾಡಬೇಕು ಎಂದು ಆಗ್ರಹಿಸಿದರು.

ಜೋಳ ಖರೀದಿಯಲ್ಲಿ ರೈತರನ್ನು ದಲ್ಲಾಳಿಗಳು ಶೋಷಣೆ ಮಾಡುತ್ತಿದ್ದು, ಜೋಳಕ್ಕೆ 1,700 ರೂ. ಇದ್ದರೇ ದಲ್ಲಾಳಿಗಳು 1,200 ರೂ.ಗೆ ಖರೀದಿ ಮಾಡಿ 1,700 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಕೆ.ಎಂ.ಎಫ್‍ಗೆ ರೈತರು ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಲು ಮುಖ್ಯಮಂತ್ರಿಗಳು ಗಮನ ಕೊಡಬೇಕು ಎಂದು ಸಲಹೆ ನೀಡಿದರು.

Comments

Leave a Reply

Your email address will not be published. Required fields are marked *