ರಾಯಣ್ಣನ ಪ್ರತಿಮೆ ಸ್ಥಾಪನೆಗೆ ವಿರೋಧಿಸೋದು ಕನ್ನಡಿಗರ ಸ್ವಾಭಿಮಾನ, ಸಹನೆ ಕೆಣಕಿದಂತೆ: ನಿಖಿಲ್

ಬೆಂಗಳೂರು: ನಮ್ಮದೇ ನಾಡಿನಲ್ಲಿ ನಮ್ಮ ನೆಲದ ಕ್ರಾಂತಿವೀರರ ಪ್ರತಿಮೆ ಸ್ಥಾಪನೆಗೆ ವಿರೋಧ ಮಾಡುವುದು ಕನ್ನಡಿಗರ ಸ್ವಾಭಿಮಾನ ಹಾಗೂ ಸಹನೆಯನ್ನು ಕೆಣಕಿದಂತೆಯೇ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಆಗ್ರಹಿಸಿದ್ದಾರೆ.

ನಿಖಿಲ್ ಟ್ವೀಟ್ ಮಾಡುವ ಮೂಲಕ ಬೆಳಗಾವಿ ಜಿಲ್ಲೆಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಪ್ರತಿಷ್ಠಾಪನೆ ಗಲಾಟೆಯ ವಿಚಾರದ ಬಗ್ಗೆ ಪ್ರತಿಕ್ತಿಯಿಸಿದ್ದಾರೆ.

“ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕರ್ನಾಟಕದ ಅಸ್ಮಿತೆ. ಅಂತಹವರ ಪ್ರತಿಮೆ ಸ್ಥಾಪನೆಗೆ ವಿರೋಧಿಸುವುದು ನಾಡದ್ರೋಹದ ಕೆಲಸ. ನಮ್ಮದೇ ನೆಲದಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪನೆ ಮಾಡಲು ಕನ್ನಡಿಗರು ಇಷ್ಟು ಹರಸಾಹಸ ಪಡಬೇಕೇ?” ಎಂದು ನಿಖಿಲ್ ಪ್ರಶ್ನೆ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಪೀರನವಾಡಿಯಲ್ಲಿ ನಮ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಪ್ರತಿಷ್ಠಾಪನೆ ವಿರೋಧಿಸಿ ಪುಂಡಾಟಿಕೆ ಮಾಡುತ್ತಿರುವ ಕೆಲವು ಸಂಘಟನೆಗಳನ್ನು ಸರ್ಕಾರ ಕೂಡಲೇ ಮಟ್ಟ ಹಾಕಬೇಕು ಎಂದು ನಿಖಿಲ್ ಆಗ್ರಹಿಸಿದ್ದಾರೆ.

“ನಮ್ಮದೇ ನಾಡಿನಲ್ಲಿ ನಮ್ಮ ನೆಲದ ಕ್ರಾಂತಿವೀರರ ಪ್ರತಿಮೆ ಸ್ಥಾಪನೆಗೆ ವಿರೋಧ ಮಾಡುವುದು ಕನ್ನಡಿಗರ ಸ್ವಾಭಿಮಾನ ಹಾಗೂ ಸಹನೆಯನ್ನು ಕೆಣಕಿದಂತೆಯೇ. ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ವಿಶೇಷ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ” ಎಂದು ನಿಖಿಲ್ ಟ್ವೀಟ್ ಮಾಡಿದ್ದಾರೆ.

ಏನಿದು ಗಲಾಟೆ:
ಬೆಳಗಾವಿಯ ಪೀರನವಾಡಿಯಲ್ಲಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಗೆ ಎಂಇಎಸ್ ಪುಂಡರು ಕ್ಯಾತೆ ತೆಗೆದಿದ್ದಾರೆ. ಪೀರನವಾಡಿಯಲ್ಲಿ ಈಗಾಗಲೇ ಶಿವಾಜಿ ಮೂರ್ತಿ ಇದೆ. ಆದರೂ ರಾಯಣ್ಣ ಪ್ರತಿಮೆ ಈ ಜಾಗದಲ್ಲಿ ಬೇಡ ಅನ್ನೋದು ಈ ಪುಂಡರ ಒತ್ತಾಯ. ಇದಕ್ಕೆ ಒಪ್ಪದ ರಾಯಣ್ಣ ಬೆಂಬಲಿಗರು ಶುಕ್ರವಾರ ಬೆಳಗ್ಗಿನ ಜಾವ ರಾಯಣ್ಣ ಪ್ರತಿಮೆಯನ್ನು ಸ್ಥಾಪಿಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಪೊಲೀಸರು ಲಾಠಿಚಾರ್ಜ್ ಕೂಡ ಮಾಡಿದ್ದರು.

ಕೊನೆಗೆ ನಮ್ಮ ನೆಲದಲ್ಲೇ, ನಮ್ಮ ನಾಡ ವೀರಪುತ್ರ, ವೀರಕನ್ನಡಿಗ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದಕ್ಕೆ 20 ಕನ್ನಡಿಗರ ಮೇಲೆ ಕೇಸ್ ಬಿದ್ದಿದೆ. ಅದು ಗಲಭೆ, ಅನುಮತಿ ಇಲ್ಲದೆ ಪ್ರವೇಶ, ಮಾರಕಾಸ್ತ್ರಗಳೊಂದಿಗೆ ಗಲಭೆ ನಡೆಸಿದ್ದ ಕೇಸ್ ಹಾಕಲಾಗಿದೆ.

Comments

Leave a Reply

Your email address will not be published. Required fields are marked *