ರಾಯಚೂರಿನಲ್ಲಿ 15 ದಿನಗಳಲ್ಲಿ 6 ವೈಟ್ ಫಂಗಸ್ ಪ್ರಕರಣ ಪತ್ತೆ

ರಾಯಚೂರು: ಬ್ಲ್ಯಾಕ್ ಫಂಗಸ್ ಬಳಿಕ ಇದೀಗ ಜಿಲ್ಲೆಯಲ್ಲಿ ವೈಟ್ ಫಂಗಸ್ ಲಗ್ಗೆ ಇಟ್ಟಿದ್ದು, ಕಳೆದ 15 ದಿನಗಳಲ್ಲಿ 6 ಜನರಲ್ಲಿ ವೈಟ್ ಫಂಗಸ್ ಪತ್ತೆಯಾಗಿದೆ.

ನಗರದ ಖಾಸಗಿ ಆಸ್ಪತ್ರೆ ಒಂದರಲ್ಲೇ 6 ಪ್ರಕರಣ ಪತ್ತೆಯಾಗಿದ್ದು, ಕೋವಿಡ್ ನಿಂದ ಗುಣಮುಖರಾದವರಲ್ಲಿ ವೈಟ್ ಫಂಗಸ್ ಪತ್ತೆಯಾಗುತ್ತಿದೆ. ಗ್ಯಾಸ್ಟ್ರೋ, ಲಿವರ್ ಹಾಗೂ ಎಂಡೋಸ್ಕೋಪಿ ತಜ್ಞ ಡಾ.ಮಂಜುನಾಥ್ ರಿಂದ ಅವರು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಸೋಂಕಿತರು ಮನೆಯಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಡಾ.ಮಂಜುನಾಥ್, ವೈಟ್ ಫಂಗಸ್ ಬಗ್ಗೆ ಹೆದರಿಕೊಳ್ಳುವ ಅಗತ್ಯವಿಲ್ಲ. 14 ದಿನ ಔಷಧಿ ಕೊಡಲಾಗುತ್ತದೆ, 7 ದಿನಗಳಲ್ಲಿ ಸೋಂಕಿತರು ಗುಣಮುಖರಾಗುತ್ತಾರೆ. ಅನ್ನನಾಳದಲ್ಲಿ ತೊಂದರೆ ಕೊಡುವ ಸೋಂಕು ಜೀವಮಾರಕವಲ್ಲ. ವೈಟ್ ಫಂಗಸ್ ರಕ್ತಕ್ಕೆ ಸೇರಿದರೆ ಮಾರಣಾಂತಿಕವಾಗುವ ಸಾಧ್ಯತೆಯಿದೆ ಅಷ್ಟೆ. 100 ಜನರಿಗೆ ಸ್ಟಿರೈಡ್ ಕೊಟ್ಟರೆ ಒಬ್ಬರಲ್ಲಿ ಈ ವೈಟ್ ಫಂಗಸ್ ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದರು.

ಕ್ಯಾಂಡಿಡಾ ಫಂಗಸ್ , ಆಸ್ಪರ್ ಜಿಲೋಸಿಸ್ ಫಂಗಸ್‍ನ್ನ ವೈಟ್ ಫಂಗಸ್ ಎಂದು ಕರೆಯುತ್ತಾರೆ. ವೈಟ್ ಫಂಗಸ್ ಸೋಂಕು ರೋಗನಿರೋಧಕ ಶಕ್ತಿ ಕಡಿಮೆಯಿರುವವರಲ್ಲಿ, ಸಕ್ಕರೆ ಕಾಯಿಲೆಯಿರುವವರಲ್ಲಿ, ಕೋವಿಡ್ ವೇಳೆ ಹೆಚ್ಚು ಸ್ಟಿರಾಯ್ಡ್ ತೆಗೆದುಕೊಂಡಿರುವ ಹಾಗೂ ಬಹುಕಾಲದಿಂದ ಸ್ಟಿರಾಯ್ಡ್ ತೆಗೆದುಕೊಳ್ಳುವವರಲ್ಲಿ ಕಾಣಿಸಿಕೊಳ್ಳುತ್ತದೆ. ಅನ್ನನಾಳದಲ್ಲಿ ತೊಂದರೆ ಉಂಟಾಗಿ ಊಟ ಸಿಕ್ಕಾಕಿಕೊಳ್ಳುವುದು, ಊಟ ಮಾಡುವಾಗ ನೋವು ಕಾಣಿಸಿಕೊಳ್ಳುತ್ತದೆ. ವೈಟ್ ಫಂಗಸ್ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ 14 ದಿನ ಔಷಧಿ ಕೊಡಲಾಗುತ್ತೆ 7 ದಿನದಲ್ಲಿ ಸೋಂಕಿತರು ಹುಷಾರಾಗುತ್ತಾರೆ ಹೆದರಿಕೊಳ್ಳುವ ಅಗತ್ಯವಿಲ್ಲ. ವೈಟ್ ಫಂಗಸ್ ಪತ್ತೆಯಾದ 6 ಜನ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಡಾ.ಮಂಜುನಾಥ್ ಹೇಳಿದ್ದಾರೆ.

ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆಯೂ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಓರ್ವ ಸೋಂಕಿತ ಸಾವನ್ನಪ್ಪಿದ್ದಾನೆ. ಇದುವರೆಗೆ ಜಿಲ್ಲಾಡಳಿತ ಮಾಹಿತಿ ಪ್ರಕಾರ ಎಂಟು ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಕೆಲವರನ್ನು ಹೈದರಾಬಾದ್, ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿದೆ. ಉಳಿದವರು ನಗರದ ಓಪೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಚಿಕಿತ್ಸೆಗೆ ಅಗತ್ಯವಾದ ಅಂಪೋಟೆರಿಸಿನ್ ಔಷಧಿ ಜಿಲ್ಲೆಯಲ್ಲಿ ಲಭ್ಯವಿಲ್ಲ. ಈಗಾಗಲೇ ಜಿಲ್ಲಾಡಳಿತ ಔಷಧಿಗಾಗಿ ಬೇಡಿಕೆ ಸಲ್ಲಿಸಿದ್ದು ಸರ್ಕಾರದಿಂದ ಇನ್ನೂ ಸರಬರಾಜಾಗಿಲ್ಲ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *