ರಾಯಚೂರಿನಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ- ಸೋಂಕಿತನ ಟ್ರಾವೆಲ್ ಹಿಸ್ಟರಿ ತಂದಿದೆ ಆತಂಕ

ರಾಯಚೂರು: ಜಿಲ್ಲೆಯಲ್ಲಿ ಇಂದು ಮಹಾರಾಷ್ಟ್ರದ ನಂಟಿನಿಂದ ಮತ್ತೊಂದು ಹೊಸ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಪರಿಣಾಮ ಕೊರೊನಾ ಸೋಂಕಿತರ ಸಂಖ್ಯೆ 7ಕ್ಕೇರಿದೆ. ಸೊಲ್ಲಾಪುರದಿಂದ ಬಂದ 28 ವರ್ಷದ ವ್ಯಕ್ತಿಯಲ್ಲಿ ಸೋಂಕು ಧೃಡಪಟ್ಟಿದೆ. ಮೇ 14 ರಂದು ರಾಯಚೂರಿಗೆ ಬಂದ ವ್ಯಕ್ತಿ ಸಾಂಸ್ಥಿಕ ಕೊರಂಟೈನ್‍ನಲ್ಲಿದ್ದ. ಸೋಂಕಿತ ವ್ಯಕ್ತಿ ರೋಗಿ ಸಂಖ್ಯೆ-1375ರ ಪ್ರಥಮ ಹಾಗೂ ದ್ವಿತೀಯ ಹಂತದ ಸಂಪರ್ಕ ಪತ್ತೆ ಕಾರ್ಯ ನಡೆದಿದೆ. ವ್ಯಕ್ತಿಯನ್ನು ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ಐಸೋಲೇಷನ್ ಮಾಡಲಾಗಿದೆ.

ರಾಯಚೂರಿಗೆ ಈ ರೋಗಿ 1,375 ಕಂಟಕವಾಗಲಿದ್ದಾನಾ ಅನ್ನೋ ಅನುಮಾನ ಶುರುವಾಗಿದೆ. ಮಹಾರಾಷ್ಟ್ರದಿಂದ ಬಂದ ಮೇಲೆ ತಪ್ಪಿಸಿಕೊಂಡು ಓಡಾಡಿದ್ದ ವ್ಯಕ್ತಿ, ಕಾರ್ ನಲ್ಲಿ ಪ್ರಯಾಣ ಬೆಳೆಸಿದ್ದ ಮಾಹಿತಿ ಪಡೆದು ಅಧಿಕಾರಿಗಳು ಮತ್ತೆ ಕ್ವಾರಂಟೈನ್ ಮಾಡಿದ್ದರು. ಪ್ರಾಥಮಿಕ ಹಂತದಲ್ಲಿ ಮೂರು ಜನರೊಂದಿಗೆ ಸಂಪರ್ಕಿಸಿದ್ದ ಎಂದು ಹೇಳಲಾಗುತ್ತಿದೆ. ಸೋಂಕಿತ ವ್ಯಕ್ತಿ ತನ್ನ ಮಗುವಿಗೆ ಅನಾರೋಗ್ಯದ ನೆಪ ಹೇಳಿ ಆಸ್ಪತ್ರೆಗೂ ಕೂಡಾ ಭೇಟಿ ನೀಡಿದ್ದ ಎನ್ನಲಾಗಿದೆ. ದೇವದುರ್ಗದ ಕೊತ್ತದೊಡ್ಡಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ವ್ಯಕ್ತಿಯ ಗಂಟಲು ದ್ರವ ಮಾದರಿಯನ್ನು ಮೇ 14ರಂದು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಇಂದು ಪಾಸಿಟಿವ್ ಇರೋದು ದೃಢ ಪಟ್ಟಿದೆ.

ಈ ಮುನ್ನ ಪತ್ತೆಯಾದ ಆರು ಪ್ರಕರಣಗಳ ಪ್ರಥಮ ಹಾಗೂ ದ್ವಿತೀಯ ಹಂತದ ಸಂಪರ್ಕ ಪತ್ತೆ ಕಾರ್ಯ ಪೂರ್ಣಗೊಂಡಿದೆ. ಸೋಂಕಿತ 6 ಜನರೊಂದಿಗೆ ಒಟ್ಟು 74 ಮಂದಿ ಪ್ರಥಮ ಹಂತದ ಸಂಪರ್ಕ ಹಾಗೂ 295 ಮಂದಿ ದ್ವಿತೀಯ ಹಂತದ ಸಂಪರ್ಕ ಹೊಂದಿರುವುದು ತಿಳಿದು ಬಂದಿದೆ. ಎಲ್ಲರನ್ನೂ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗಿದೆ. ರೋಗಿ ಸಂಖ್ಯೆ 1,152 ರಿಂದ ಕ್ರಮವಾಗಿ ರೋಗಿ ಸಂಖ್ಯೆ 1,157 ವರೆಗೆ 6 ಜನ ಸೋಂಕಿತರು ಸಹ ಮಹಾರಾಷ್ಟ್ರ ದಿಂದ ಬಂದ ಕೂಲಿ ಕಾರ್ಮಿಕರಾಗಿದ್ದಾರೆ. ಇದುವರೆಗೆ ಮಹಾರಾಷ್ಟ್ರದಿಂದ 3 ಸಾವಿರ ಜನ ರಾಯಚೂರಿಗೆ ಬಂದಿದ್ದು ಇನ್ನೂ 1,500 ಜನ ಬರುವ ನಿರೀಕ್ಷೆಯಿದೆ.

ಜಿಲ್ಲೆಯಲ್ಲಿ ಇಂದು ಒಟ್ಟು 314 ಜನರ ಗಂಟಲಿನ ದ್ರವ ಮಾದರಿಯನ್ನು ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೋವಿಡ್-19 ಫಲಿತಾಂಶಕ್ಕಾಗಿ ಕಳುಹಿಸಲಾಗಿದ್ದ ಮಾದರಿಗಳಲ್ಲಿ ಇಂದು 409 ವರದಿಗಳು ನೆಗೆಟಿವ್ ಬಂದಿದೆ. ಒಂದು ಪ್ರಕರಣ ಪಾಸಿಟಿವ್ ಎಂದು ದೃಢಪಟ್ಟಿದೆ. ಒಟ್ಟಾರೆ ಜಿಲ್ಲೆಯಿಂದ ಇದೂವರೆಗೆ 4,411 ಜನರ ರಕ್ತ ಹಾಗೂ ಗಂಟಲಿನ ದ್ರವ್ಯ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, 3,275 ವರದಿಗಳು ನೆಗೆಟಿವ್ ಆಗಿದೆ. ಉಳಿದ 1,131 ಸ್ಯಾಂಪಲ್‍ಗಳ ಫಲಿತಾಂಶ ಬರಬೇಕಿದೆ.

ಫಿವರ್ ಕ್ಲಿನಿಕ್‍ಗಳಲ್ಲಿಂದು 489 ಜನರನ್ನು ಥರ್ಮಲ್ ಸ್ಕ್ರೀನಿಂಗ್ ಒಳಪಡಿಸಲಾಗಿದೆ. ರಾಯಚೂರು ತಾಲೂಕಿನ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ 4,933, ಸಿಂಧನೂರು ತಾಲೂಕಿನ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ 585, ಮಾನವಿ ತಾಲೂಕಿನ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ 1,639, ದೇವದುರ್ಗ ತಾಲೂಕಿನ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ 1,791 ಹಾಗೂ ಲಿಂಗಸೂಗೂರು ತಾಲೂಕಿನ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ 873 ಜನರು ಸೇರಿದಂತೆ ಒಟ್ಟು 9,821 ಜನರನ್ನು ಸಾಂಸ್ಥಿಕ ಕ್ವಾರಂಟೈನ್‍ ಮಾಡಲಾಗಿದೆ. ಸಾಂಸ್ಥಿಕ ಕ್ವಾರಂಟೈನ್‍ನಲ್ಲಿಂದು 784 ಜನರನ್ನು ದಾಖಲಿಸಲಾಗಿದ್ದು, ಇದುವರೆಗೂ ಒಟ್ಟಾರೆ 10,736 ಜನರನ್ನು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿರಿಸಲಾಗಿತ್ತು. ಇದರಲ್ಲಿ 915 ಜನರು ಬಿಡುಗಡೆ ಹೊಂದಿರುತ್ತಾರೆ.

Comments

Leave a Reply

Your email address will not be published. Required fields are marked *