ರಾಮ ಮಂದಿರ ನಿರ್ಮಾಣವಾದರೆ ಕೊರೊನಾ ದೂರವಾಗಲ್ಲ: ದಿನೇಶ್ ಗುಂಡೂರಾವ್

ಉಡುಪಿ: ರಾಮ ಮಂದಿರ ನಿರ್ಮಾಣವಾದರೆ ಕೊರೊನಾ ದೂರವಾಗಲ್ಲ. ಬಿಜೆಪಿಯವರು ಅವೈಜ್ಞಾನಿಕವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹರಿಹಾಯ್ದಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಮಂದಿರದ ಉದ್ದೇಶದ ದುರುಪಯೋಗ ಬೇಡ. ರಾಮ ಮಂದಿರ ನಿರ್ಮಾಣವನ್ನು ಸ್ವಾಗತಿಸುತ್ತೇವೆ. ಭವ್ಯವಾದ ರಾಮ ಮಂದಿರ ನಿರ್ಮಾಣ ಆಗಲಿ. ಮಂದಿರಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಉದ್ದೇಶ ದುರುಪಯೋಗ ಆಗುವುದು ಬೇಡ ಎಂದು ಟಾಂಗ್ ನೀಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ಚಿಕಿತ್ಸಾ ಸಲಕರಣೆಗಳ ಖರೀದಿಯಲ್ಲಿ ವ್ಯಾಪಕ ಲೂಟಿಯಾಗಿದೆ. ಕಾಂಗ್ರೆಸ್ ಆರೋಪ ಮಾಡಿ 25 ದಿನವಾದರೂ ಉತ್ತರ ಸಿಕ್ಕಿಲ್ಲ. ಯಾವುದೇ ಮಾಹಿತಿ ವಿಪಕ್ಷ ನಾಯಕರಗೆ ಬಂದಿಲ್ಲ. ವೆಂಟಿಲೇಟರ್, ಪಿಪಿಇ ಕಿಟ್, ಸ್ಯಾನಿಟೈಸರ್ ಖರೀದಿಯಲ್ಲಿ ಭ್ರಷ್ಟಾಚಾರ ಆಗಿದೆ. ಮೂರರಿಂದ ನಾಲ್ಕು ಪಟ್ಟು ಹಣ ಕೊಟ್ಟು ಖರೀದಿ ಮಾಡಿದ್ದಾರೆ. ಕೊರೊನಾ ಸಲಕರಣೆ ಖರೀದಿಯಲ್ಲೂ ಶೇಕಡಾ 50ರಷ್ಟು ಲೂಟಿಯಾಗಿದೆ. ಸುಮಾರು ಎರಡು ಸಾವಿರ ಕೋಟಿ ರೂ.ಗಳನ್ನು ಬಿಜೆಪಿ ಲೂಟಿ ಮಾಡಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಪ್ರಶ್ನೆ ಮಾಡಿದರೆ ಲೀಗಲ್ ನೋಟೀಸ್ ಕೊಡುತ್ತಾರೆ. ಧೈರ್ಯ ಇದ್ದರೆ ಮಾನನಷ್ಟ ಮೊಕದ್ದಮೆ ಹಾಕಿ. ಕಾಂಗ್ರೆಸ್ ಕೋರ್ಟ್ ಮೂಲಕ ಹೋರಾಟ ಮಾಡುತ್ತದೆ. ವ್ಯಾಪಕ ಖರೀದಿಯ ಸಮಗ್ರ ತನಿಖೆಯಾಗಲಿ. ಕೊರೊನಾ ಸಲಕರಣೆ ಖರೀದಿ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು. ಅಲ್ಲದೆ ಕೇಂದ್ರ ಸರ್ಕಾರ ಕರ್ನಾಟಕವನ್ನು ಕೈಚೆಲ್ಲಿದೆ. ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಬರುತ್ತಿಲ್ಲ ಎಂದು ದಿನೇಶ್ ಗುಂಡೂರಾವ್ ಹರಿಹಾಯ್ದಿದ್ದಾರೆ.

Comments

Leave a Reply

Your email address will not be published. Required fields are marked *