ರಾಮ್‍ಸೇನಾ ಕರ್ನಾಟಕದಿಂದ ಯೋಗಿ ಮಠದಲ್ಲಿ ಭಜನೆ, ವಿಶೇಷ ಪೂಜೆ

– ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಸ್ಥಾನದ ಪುಣ್ಯಭೂಮಿಯಲ್ಲಿ ನಡೆಯುತ್ತಿರುವ ಶ್ರೀರಾಮ ಮಂದಿರದ ಭೂಮಿ ಪೂಜೆ ನಿಮಿತ್ತ ರಾಮಸೇನೆ ಕರ್ನಾಟಕ ಮಂಗಳೂರು ಇವರ ವತಿಯಿಂದ ರಾಮ ತಾರಕ ಮಂತ್ರ ಪಠಣ ಮತ್ತು ಭಜನಾ ಕಾರ್ಯಕ್ರಮ ಮಂಗಳೂರು ಕದ್ರಿ ಬಳಿ ಇರುವ ಯೋಗಿ ಮಠದಲ್ಲಿ ನಡೆಸಲಾಯಿತು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷರಾಗಿರುವ ನಾಥ ಪಂಥದ ಜೋಗಿ ಮಠದ ಒಂಬತ್ತನೇ ಮಠವಾದ ಕದ್ರಿಯ ಯೋಗಿ ಮಠದಲ್ಲಿ ರಾಮ್‍ಸೇನಾ ಕರ್ನಾಟಕ ಈ ಪೂಜಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಮಂಗಳಾರತಿ ಮಾಡಲಾಯಿತು.

ಯೋಗಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ಜ್ಯೋತಿ ಬೆಳಗಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ಮಾಡಿದರು, ಈ ಸಂದರ್ಭದಲ್ಲಿ ರಾಮ್ ಸೇನಾ ಸಂಸ್ಥಾಪಕರಾದ ಪ್ರಸಾದ್ ಅತ್ತಾವರ್ ಹಾಗೂ ಪದಾಧಿಕಾರಿಗಳಾದ ಮಂಜುನಾಥ್ ಕುಂದರ್, ದಿನೇಶ್ ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಬಳಿಕ ರಾಮ್‍ಸೇನೆ ಕಾರ್ಯಕರ್ತರು ಮಂಗಳೂರು ಮಹಾನಗರ ಪಾಲಿಕೆ ಎದುರು ಜಿಲ್ಲೆಯಲ್ಲಿ ಸೆಕ್ಷನ್ ಇದ್ದರೂ ಕೂಡ ನಿಯಮ ಉಲ್ಲಂಘಿಸಿ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.

Comments

Leave a Reply

Your email address will not be published. Required fields are marked *