ರಾಮಮಂದಿರ ರಾಷ್ಟ್ರೀಯ ಏಕತೆಯ ಪ್ರತಿಬಿಂಬವಾಗಲಿ: ಹೆಚ್‍ಡಿಕೆ

– ರಾಮಮಂದಿರ ಕೆಲವರಿಗೆ ರಾಜಕೀಯ ದಾಳವಾಗಿದೆ

ಬೆಂಗಳೂರು: ರಾಮಮಂದಿರ ನಿರ್ಮಾಣ ಸಾಂಸ್ಕೃತಿಕ ಪರಂಪರೆಯ ಬೆಸುಗೆ ಹಾಗೂ ರಾಷ್ಟ್ರೀಯ ಏಕತೆಯ ಪ್ರತಿಬಿಂಬವಾಗಲಿ ಎಂಬ ಆಶಯ ನನ್ನದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.

ಇಂದು ಭಾರತೀಯರು ಶತಮಾನದಿಂದ ಕಾಯುತ್ತಿದ್ದ ಕನಸು ನನಸಾಗಿದೆ. ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲು ಶಿಲಾನ್ಯಾಸ ಕಾರ್ಯಕ್ರಮ ಇಂದು ನೆರವೇರದಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು, ರಾಮಮಂದಿರ ನಿರ್ಮಾಣ ಸಾಂಸ್ಕೃತಿಕ ಪರಂಪರೆಯ ಬೆಸುಗೆ ಹಾಗೂ ರಾಷ್ಟ್ರೀಯ ಏಕತೆಯ ಪ್ರತಿಬಿಂಬವಾಗಲಿ ಎಂಬ ಆಶಯ ನನ್ನದು ಎಂದಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ ಭಾರತೀಯರ ಶತಮಾನಗಳ ಕನಸು ನನಸಾಗಲು ಇಂದು ಕಾಲ ಕೂಡಿಬಂದಿದೆ. ಇದು ನಮ್ಮೆಲ್ಲರ ಸಂತೋಷದ ಘಳಿಗೆ. ಅದಕ್ಕೂ ಮಿಗಿಲಾಗಿ ಇದು ಭಾವನಾತ್ಮಕ ಸನ್ನಿವೇಶವೆಂಬುದು ನನ್ನ ಅನಿಸಿಕೆ. ಎಲ್ಲರ ಹೃನ್ಮನಗಳಲ್ಲಿ ನೆಲೆಸಿರುವ ರಾಮನ ಎಲ್ಲ ತತ್ವಾದರ್ಶಗಳಿಗೆ ಮಂದಿರವು ಸಂಕೇತವಾಗಲಿ. ಭಾರತದ ಹೆಗ್ಗುರುತಾಗಲಿ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ರಾಮನ ಜನಪರ ಕಾಳಜಿ ಹಾಗೂ ಹೃದಯ ವೈಶಾಲ್ಯ ಈಗಿನ ನಮ್ಮ ಜನಪ್ರತಿನಿಧಿಗಳಿಗೆ ಮೇರು ಪ್ರೇರಣೆಯಾಗಲಿ ಎಂದು ಹೆಚ್‍ಡಿಕೆ ಟ್ವೀಟ್ ಮಾಡಿದ್ದಾರೆ.

ಅಯೋಧ್ಯೆಯಲ್ಲಿ ಮಂದಿರವೊಂದನ್ನು ಕಟ್ಟಿಕೊಳ್ಳಲು ಭಾರತೀಯರಾದ ನಾವು ಕಾನೂನಾತ್ಮಕ ಹೋರಾಟ ನಡೆಸಬೇಕಾಗಿದ್ದು, ಅದು ಕೆಲವರಿಗೆ ರಾಜಕೀಯ ದಾಳವಾಗಿದ್ದು, ಅಧಿಕಾರಕ್ಕೇರಲು ಏಣಿಯಾಗಿದ್ದು ನಮ್ಮ ಕೆಟ್ಟ ಘಳಿಗೆಗಳಲ್ಲಿ ಒಂದು. ರಾಮನ ಆದರ್ಶಗಳಿಗೆ ಈ ದೇಗುಲವು ಸಾಮರಸ್ಯದ ಸಂಕೇತವಾಗಿ ಉಳಿಯಲಿ. ಈ ಮೂಲಕ ಸ್ವಾರ್ಥ ನಶಿಸಲಿ. ಎಲ್ಲರಿಗೂ ಶುಭ ತರಲಿ ಎಂದು ಇನ್ನೊಂದು ಟ್ವೀಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *