ರಾಮನಗರ, ಚನ್ನಪಟ್ಟಣ, ಮಾಗಡಿ ಆಸ್ಪತ್ರೆಗಳ ಆಮ್ಲಜನಕ ಘಟಕ ಈ ತಿಂಗಳೇ ಆರಂಭ : ಅಶ್ವಥ್ ನಾರಾಯಣ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ ಸೇರ್ಪಡೆಯಾದ ಮರುದಿನವೇ ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ ಅವರು ರಾಮನಗರ ಜಿಲ್ಲೆಯ ಕೋವಿಡ್ ಪರಿಸ್ಥಿತಿಯನ್ನು ಅವಲೋಕನ ಮಾಡಿದರು.

ಮೂರನೇ ಅಲೆಯನ್ನು ಪರಿಣಾಮಕಾರಿಯಾಗಿ ತಡೆಯುವುದು ಸೇರಿ ಇಡೀ ಜಿಲ್ಲೆಯಲ್ಲಿ ಕೈಗೊಂಡಿರುವ ಲಸಿಕೀರಣ, ಆರೋಗ್ಯ ಮೂಲಸೌಕರ್ಯಗಳ ಅಭಿವೃದ್ಧಿ ಇನ್ನಿತರೆ ಕ್ರಮಗಳ ಬಗ್ಗೆ ವ್ಯಾಪಕ ಪರಿಶೀಲನೆ ನಡೆಸಿದರಲ್ಲದೆ, ಬಾಕಿ ಯಾವುದಾದರೂ ಕೆಲಸ ಇದ್ದರೆ ಅದನ್ನು ವೇಗವಾಗಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ 0.22ರಷ್ಟಿದೆ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ. ಹಾಗಂತ ಎಚ್ಚರ ತಪ್ಪುವುದೂ ಬೇಡ. ಪರೀಕ್ಷೆ, ಲಸಿಕೆ ಹಾಗೂ ಆರೋಗ್ಯ ಮೂಲಸೌಕರ್ಯಗಳ ಬಗ್ಗೆ ನಿತ್ಯವೂ ಗಮನವಿಟ್ಟು ಕೆಲಸ ಮಾಡಬೇಕು ಎಂದರು. ಇದನ್ನೂ ಓದಿ: ಮೈಸೂರು ವಿವಿ ಪ್ರಾಧ್ಯಾಪಕನಿಂದ ಸಂಶೋಧನಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಅಗಸ್ಟ್ 15ರೊಳಗೆ ಬಳಕೆಗೆ ಮುಕ್ತ 
ರಾಮನಗರ ಜಿಲ್ಲಾಸ್ಪತ್ರೆ ಹಾಗೂ ಚನ್ನಪಟ್ಟಣ, ಮಾಗಡಿ ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದಕ ಘಟಕಗಳನ್ನು ಸ್ಥಾಪಿಸುವ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಘಟಕಗಳಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಇದೇ 15ರ ಹೊತ್ತಿಗೆ ಬಳಕೆ ಮಾಡಿಕೊಳ್ಳಲಾಗುವುದು. ಆ ದಿನದೊಳಗೆ ಬಾಕಿ ಇರುವ ಎಲ್ಲ ಕೆಲಸಗಳನ್ನು ಮುಗಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.

ಪ್ರತಿ ದಿನವೂ ಜಿಲ್ಲೆಯಲ್ಲಿ 1,800 ಆರ್ಟಿಪಿಸಿಆರ್-ರಾಟ್ ಪರೀಕ್ಷೆಗಳನ್ನು ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಆದರೆ, ಆ ಗುರಿಯನ್ನು ಮೀರಿ 2,400 ಪರೀಕ್ಷೆಗಳನ್ನು ಮಾಡುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು ಶ್ಲಾಘನೀಯ ಕೆಲಸ ಅಂತ ತಿಳಿಸಿದರು.

ಇದೇ ವೇಳೆ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡುವುದನ್ನು ಚುರುಕುಗೊಳಿಸಲಾಗಿದೆ. ಈಗಾಗಲೇ 18 ವರ್ಷ ಮೇಲ್ಪಟ್ಟ ಶೇ.54 ರಷ್ಟು ಜನಕ್ಕೆ ಲಸಿಕೆ ನೀಡಲಾಗಿದೆ. ಇದರಲ್ಲಿ ಸೆಕೆಂಡ್ ಡೋಸ್ ಪಡೆದವರು ಶೇ.34ರಷ್ಟು ಇದ್ದಾರೆಂದು ಸಚಿವರು ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ರಾಕೇಶ್ ಸಿಂಗ್, ಜಿಪಂ ಸಿಇಒ ಇಕ್ರಂ ಸೇರಿ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.

Comments

Leave a Reply

Your email address will not be published. Required fields are marked *