ಹೈದರಾಬಾದ್: ಇತ್ತೀಚೆಗಷ್ಟೆ ನಟ ರಾಣಾ ದಗ್ಗುಬಾಟಿಯವರು ತಾನು ಪ್ರೀತಿಸಿದ ಉದ್ಯಮಿ ಮಿಹೀಕಾ ಬಜಾಜ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಈ ಜೋಡಿಯ ಮದುವೆ ದಿನಾಂಕ ಕೂಡ ನಿಗದಿಯಾಗಿದೆ.
ರಾಣಾ ಮತ್ತು ಮಿಹೀಕಾ ಮದುವೆ ಇದೇ ವರ್ಷದ ಡಿಸೆಂಬರ್ ನಲ್ಲಿ ನಡೆಯಲಿದೆ ಎಂದು ರಾಣಾ ತಂದೆ ನಿರ್ಮಾಪಕ ಸುರೇಶ್ ಬಾಬು ತಿಳಿಸಿದ್ದಾರೆ. ಆದರೆ ಈಗ ಎರಡು ಕುಟುಂಬದವರು ಮಾತುಕತೆ ನಡೆಸಿದ್ದು, ಇನ್ನೂ ಎರಡು ತಿಂಗಳಲ್ಲಿ ಇವರ ವಿವಾಹ ಮಾಡಿ ಮುಗಿಸಲು ತೀರ್ಮಾನಿಸಿವೆ.

ಅದರಂತೆಯೇ ಆಗಸ್ಟ್ 8 ರಂದು ರಾಣಾ ಮತ್ತು ಮಿಹೀಕಾ ಮದುವೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ. ಇವರ ಮದುವೆ ಹೈದರಾಬಾದ್‍ನಲ್ಲಿ ಭವ್ಯ ಮಂಟಪದಲ್ಲಿ ನಡೆಯಲಿದೆ ಎಂದು ರಾಣಾ ತಂದೆ ಸ್ಪಷ್ಟಪಡಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಸೂಚಿರುವ ಮಾರ್ಗಸೂಚಿಯಂತೆ ಮದುವೆ ನಡೆಯಲಿದ್ದು, ಎರಡು ಕುಟುಂಬದ ಆಪ್ತರು ಮಾತ್ರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಮೂಲಕ ಚಿತ್ರರಂಗದ ಗಣ್ಯರು ಮದುವೆಯಲ್ಲಿ ಭಾಗಿಯಾಗುವ ಸಾಧ್ಯತೆ ಕಡಿಮೆ ಇದೆ.
ಒಂದು ವೇಳೆ ಅಷ್ಟರಲ್ಲಿ ಸರ್ಕಾರ ತನ್ನ ಮಾರ್ಗಸೂಚಿಯನ್ನು ಸಡಿಲಗೊಳಿಸಿದರೆ ಅದ್ಧೂರಿಯಾಗಿ ಮದುವೆ ಮಾಡಲು ಪ್ಲಾನ್ ಮಾಡಲಾಗಿದೆ. ಅಲ್ಲದೇ ಸರ್ಕಾರ ಹೆಚ್ಚು ಜನರು ಮದುವೆಯಲ್ಲಿ ಭಾಗವಹಿಸಲು ಅನುಮತಿ ನೀಡಿದರೆ ಸಿನಿಮಾರಂಗದ ಗಣ್ಯರು ಭಾಗವಹಿಸಲಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೆ ರಾಣಾ ಅವರು ತನ್ನ ಅಭಿಮಾನಿಗಳಿಗೆ ತಾನು ಮಿಹೀಕಾ ಅವರ ಪ್ರೀತಿಯ ಬಲೆಯಲ್ಲಿ ಸಿಲುಕಿರುವುದಾಗಿ ಹೇಳಿಕೊಂಡಿದ್ದರು. ಪ್ರೀತಿಯ ಬಗ್ಗೆ ತಿಳಿಸಿದ ಒಂದೇ ವಾರದಲ್ಲಿ ರಾಣಾ ಮಿಹೀಕಾ ಅವರ ಜೊತೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಇದನ್ನು ಸ್ವತಃ ಅವರೇ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕುವ ಮೂಲಕ ತಿಳಿಸಿದ್ದರು.

ರಾಣಾ ದುಗ್ಗುಬಾಟಿಯವರ ಪ್ರೇಯಸಿ ಮಿಹೀಕಾ ಅವರು ಹೈದರಾಬಾದ್ ಮೂಲದವರು. ಮಿಹೀಕಾ ಚೆಲ್ಸಿಯಾ ವಿಶ್ವವಿದ್ಯಾಲಯದಲ್ಲಿ ಇಂಟೀರಿಯರ್ ಡಿಸೈನಿಂಗ್ ಅಧ್ಯಯನ ಮಾಡಿದ್ದು, ಉದ್ಯಮಿ ಸಮರ್ಥ್ ಬಜಾಜ್ ಅವರ ಸಹೋದರಿಯಾಗಿದ್ದಾರೆ. ಜೊತೆಗೆ ಮಾಡೆಲಿಂಗ್ ಮಾಡಿಕೊಂಡು ಅವರ ತಾಯಿ ಬಂಟಿ ಬಜಾಜ್ ಅವರ ಉದ್ಯಮವನ್ನು ನೋಡಿಕೊಳ್ಳುತ್ತಾರೆ. ಮುಂಬೈನಲ್ಲೇ ಹೆಚ್ಚು ಇರುವ ಮಿಹೀಕಾ ಮತ್ತು ರಾಣಾ ಒಬ್ಬರನ್ನೊಬ್ಬರು ಇಷ್ಟ ಪಟ್ಟಿದ್ದರು.
ಪ್ರಸ್ತುತ ರಾಣಾ ದಗ್ಗುಬಾಟಿ ‘ವಿರಾಟ ಪರ್ವ’ ಅಭಿನಯಿಸಿದ್ದಾರೆ. ಜೊತೆಗೆ ಗಣ ಶೇಖರ್ ನಿರ್ದೇಶನದ ಪೌರಾಣಿಕ ‘ಹಿರಣ್ಯಕಶಿಪು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Leave a Reply