– ನಂದಿಗ್ರಾಮದಲ್ಲಿ ಶಿಷ್ಯ ಸುವೇಂದು ಎದುರು ಸೋಲು
– ಆಪರೇಷನ್ ಕಮಲಕ್ಕೊಳಗಾದ ಬಹುತೇಕರಿಗೆ ಸೋಲು
ಕೋಲ್ಕತ್ತಾ: ಬಂಗಾಳ ಪಡೆದುಕೊಳ್ಳಲು ಮೋದಿ-ಅಮಿತ್ ಶಾ ಮಾಡಿದ ಸರ್ವ ಪ್ರಯತ್ನ, ಬಂಗಾಳ ಉಳಿಸಿಕೊಳ್ಳಲು ದೀದಿ ಮಮತಾ ನಡೆಸಿದ ಏಕಾಂಗಿ ಹೋರಾಟ, ವ್ಹೀಲ್‍ಚೇರ್ ಪ್ರಚಾರದ ಕಾರಣದಿಂದ ತೀವ್ರ ಕುತೂಹಲ ಕೆರಳಿಸಿದ್ದ ಫಲಿತಾಂಶ ಪ್ರಕಟವಾಗಿದೆ. ಎಲ್ಲರ ಲೆಕ್ಕಾಚಾರಗಳನ್ನು ಸುಳ್ಳು ಮಾಡಿದ ಟಿಎಂಸಿ ಪ್ರಚಂಡ ಗೆಲುವು ಸಾಧಿಸಿದೆ. ಈ ಮೂಲಕ ದೀದಿ ಸತತ ಮೂರನೇ ಬಾರಿಗೆ ಗದ್ದುಗೆ ಏರೋದು ಖಚಿತವಾಗಿದೆ.

ಸತತ ಮೂರನೇ ಬಾರಿಗೆ ಸಿಎಂ ಆಗುತ್ತಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಮಮತಾ ಬ್ಯಾನರ್ಜಿ ಪಾತ್ರರಾಗುತ್ತಿದ್ದಾರೆ. ಅಧಿಕಾರ ಪಡೆದೇ ತೀರಬೇಕೆಂದು ಚುನಾವಣಾ ಕದನದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾ ರಣಭೀಕರವಾಗಿ ಹೋರಾಡಿದ್ದರ ಹೊರತಾಗಿಯೂ ಬಿಜೆಪಿ ಶತಕದಂಚು ತಲುಪಲು ಏದುಸಿರು ಬಿಟ್ಟಿದೆ. ಆದರೆ ನಂದಿಗ್ರಾಮದಲ್ಲಿ ನಡೆದ ತೀವ್ರ ಹಣಾಹಣಿಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಗೆದ್ದು ಸೋತಿದ್ದಾರೆ.

ಮೊದಲ ಆರು ಸುತ್ತುಗಳವರೆಗೂ ಮಮತಾ ತೀವ್ರ ಹಿನ್ನೆಡೆ ಕಂಡಿದ್ದನ್ನು ನೋಡಿ, ಸುವೆಂದು ಗೆದ್ದೇ ಬಿಡ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದ್ರೆ ಫಿನಿಕ್ಸ್ ಮಾದರಿಯಲ್ಲಿ ಮುನ್ನಡೆಗೆ ಬಂದರು. ನಂತರ ಒಮ್ಮೆ ಸುವೆಂದು ಮುನ್ನಡೆಗೆ ಬಂದರೆ ಮರುಕ್ಷಣವೇ ಮಮತಾ ಲೀಡ್‍ಗೆ ತೆಗೆದುಕೊಳ್ಳುತ್ತಿದ್ದರು. ಕೊನೆವರೆಗೂ ವಿಜಯಮಾಲೆ ತೂಗೂಯ್ಯಾಲೆಯಲ್ಲೇ ಇತ್ತು. ಅಷ್ಟರ ಮಟ್ಟಿಗೆ ಸುವೆಂದು ಅಧಿಕಾರಿ ಬಿಗ್ ಫೈಟ್ ನೀಡಿದರು.

ಕೊನೆಗೆ ಚುನಾವಣಾಧಿಕಾರಿಗಳು ಮಮತಾ 1,200 ಮತಗಳಿಂದ ಗೆದ್ದರು ಎಂದು ಘೋಷಿಸಿದರು. ಆದ್ರೆ ಇದಾದ ಸ್ವಲ್ಪ ಹೊತ್ತಿಗೆ ಸುವೆಂದು 1,622 ಮತಗಳಿಂದ ಗೆದ್ರು ಎಂದು ಘೋಷಿಸಲಾಯ್ತು. ಸದ್ಯ ನಂದಿಗ್ರಾಮ ಫಲಿತಾಂಶದ ಬಗ್ಗೆ ಗೊಂದಲ ಏರ್ಪಟ್ಟಿದೆ. ಮತ್ತೆ ಮರು ಎಣಿಕೆ ನಡೆಯುತ್ತಿದೆ. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಮಮತಾ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಬಹುತೇಕ (140) ನಾಯಕರು ಸೋಲನ್ನಪ್ಪಿದ್ದಾರೆ. ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಪ್ರಧಾನಿ ಮೋದಿ ಟ್ವೀಟ್ ಮಾಡಿ, ಮಮತಾಗೆ ಅಭಿನಂದನೆ ಹೇಳಿದ್ದಾರೆ.

ಯಾರಿಗೆ ಎಷ್ಟು ಕ್ಷೇತ್ರ:
* ಟಿಎಂಸಿ- 215 (48.01%) (211 ಕಳೆದ ಬಾರಿಯ ಸ್ಥಾನ)
* ಬಿಜೆಪಿ- 75 (37.08%) (03 ಕಳೆದ ಬಾರಿಯ ಸ್ಥಾನ)
* ಎಡರಂಗ+ಕಾಂಗ್ರೆಸ್- 01 (6.53%) (70 ಕಳೆದ ಬಾರಿಯ ಸ್ಥಾನ)
* ಇತರೆ- 01 (8.38%) (10 ಕಳೆದ ಬಾರಿಯ ಸ್ಥಾನ)

ಟಿಎಂಸಿ ಗೆಲುವಿಗೆ ಕಾರಣ: ಮಮತಾ ಬ್ಯಾನರ್ಜಿ ನಾಯಕತ್ವ, ವ್ಯಕ್ತಿತ್ವ ಹೆಚ್ಚು ಪರಿಣಾಮಕಾರಿಯಾಗಿತ್ತು. ಟಿಎಂಸಿ ಪಾಲಿಗೆ ದೀದಿ ಒನ್ ಮ್ಯಾನ್ ಆರ್ಮಿ ಎಂಬಂತೆ ಇಡೀ ಚುನಾವಣೆಯಲ್ಲಿ ಬಿಂಬಿತರಾದರು. ಚುನಾವಣೆ ಪ್ರಚಾರದುದ್ದಕ್ಕೂ ಬಂಗಾಳದ ಮಗಳು, ಬಂಗಾಳದ ಆಸ್ಮಿತೆಯ ತಂತ್ರಗಳನ್ನು ಪ್ರಯೋಗಿಸಿದರು. ಚುನಾವಣೆ ವೇಳೆ ಆದ ಕಾಲಿನ ನೋವಿನ ಅನುಕಂಪ ವರ್ಕೌಟ್ ಆಗಿರುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಟಿಎಂಸಿ ತಳಮಟ್ಟದಿಂದಲೂ ಪ್ರಬಲವಾಗಿದೆ.
ಬಿಜೆಪಿ ಸೋಲಿಗೆ ಕಾರಣ: ಹೊರಗಿನವರು ಎಂಬ ಆರೋಪಗಳ ಜೊತೆ ವಲಸಿಗರಿಗೆ ಬಿಜೆಪಿ ಹೆಚ್ಚು ಆದ್ಯತೆ ನೀಡಿತ್ತು. ಪಶ್ಚಿಮ ಬಂಗಾಳದಲ್ಲಿ ಆಪರೇಷನ್ ಕಮಲವೇ ಬಿಜೆಪಿಗೆ ಮುಳವಾಗಿದೆ. ಮೂಲ ಬಿಜೆಪಿ ನಾಯಕರು, ಕಾರ್ಯಕರ್ತರ ನಿರ್ಲಕ್ಷ್ಯವೂ ಸೋಲಿಗೆ ಕಾರಣ ಎನ್ನಲಾಗ್ತಿದೆ. ಗೆಲ್ಲುವ ಮೊದಲೇ ಸುವೆಂದು ಮತ್ತು ದಿಲೀಪ್ ಘೋಷ್ ನಡುವೆ ಸಿಎಂ ಗಾದಿಗಾಗಿ ಮುಸುಕಿನ ಗುದ್ದಾಟ ನಡೆದಿತ್ತು.

Leave a Reply