ರಾಜ್ಯಾದ್ಯಂತ ಮುಂದುವರಿದ ವರುಣನ ಅಬ್ಬರ – ಹೆಚ್ಚಿದ ಮಳೆಯಿಂದ ರೈತರಲ್ಲಿ ಆತಂಕ

– ಚಳಿಯ ವಾತಾವರಣಕ್ಕೆ ರಾಜಧಾನಿ ತತ್ತರ

ಬೆಂಗಳೂರು: ರಾಜ್ಯದೆಲ್ಲೆಡೆ ವರುಣನ ಆರ್ಭಟ ಮುಂದುವರಿದಿದೆ. ಕೆಲವು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದ ಕೆರೆ, ಕಟ್ಟೆಗಳು ತುಂಬಿದ್ದು, ಹಲವೆಡೆ ಅವಾಂತರ ಸೃಷ್ಟಿಸಿದೆ.

ಕಳೆದ ಮೂರು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಬಿಟ್ಟುಬಿಡದೆ ಮಳೆ ಸುರಿಯುತ್ತಿದ್ದು ಜನರನ್ನು ಮತ್ತೆ ಆತಂಕಕ್ಕೆ ದೂಡಿದೆ. ಬಾಗಮಂಡಲ ಮತ್ತು ತಲಕಾವೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದರೆ, ಮಡಿಕೇರಿ, ನಾಪೋಕ್ಲು ಸೇರಿದಂತೆ ಹಲವೆಡೆ ಮಳೆ ಜೊತೆಗೆ ಭಾರೀ ಪ್ರಮಾಣದಲ್ಲಿ ಚಳಿಗಾಳಿ ಬೀಸುತ್ತಿದ್ದು ಜನರು ತತ್ತರಿಸಿದ್ದಾರೆ. ತಲಕಾವೇರಿ, ಬಾಗಮಂಡಲ ಸುತ್ತಮುತ್ತಲಿನ ಬೆಟ್ಟ ಪ್ರದೇಶದಲ್ಲೆಲ್ಲಾ ಭಾರೀ ಮಳೆ ಸುರಿಯುತ್ತಿದ್ದು ಕಾವೇರಿ ನದಿಯ ನೀರಿನ ಮಟ್ಟ ಜಾಸ್ತಿಯಾಗಿದೆ. ಒಂದು ವೇಳೆ ಮಳೆ ತೀವ್ರಗೊಂಡಲ್ಲಿ ಜಿಲ್ಲೆಯಲ್ಲಿ ಮತ್ತೆ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ.

ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಉಡುಪಿ ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅರಬ್ಬೀ ಸಮುದ್ರದ ತೀರದ ತಾಲೂಕುಗಳಲ್ಲಿ ಗಾಳಿ ಸಹಿತ ಮಳೆ ಬೀಳುತ್ತಿದೆ. ಸೋಮವಾರ ಯಲ್ಲೋ ಅಲರ್ಟ್ ಇದ್ದು, ಸುಮಾರು 60 ರಿಂದ 110 ಮಿಲಿಮೀಟರ್ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಮೀನುಗಾರಿಕೆ ನಡೆಸಲಾಗುತ್ತಿದೆ. ಮಳೆ ಮುಂದುವರಿದರೆ ಬೆಳೆ ಕೊಳೆಯುವ ಸಾಧ್ಯತೆ ಇದೆ ಎಂದು ರೈತರು ಆತಂಕಗೊಂಡಿದ್ದಾರೆ.

ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಲಲ್ಲಿ ಜಿಟಿಜಿಟಿ ಮಳೆಯಾಗಿದೆ. ಹವಾಮಾನ ಇಲಾಖೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದ್ರೂ, ಹೆಚ್ಚಿನ ಮಳೆಯಾಗಿಲ್ಲ. ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ಸ್ವಲ್ಪ ಹೆಚ್ಚಿನ ಮಳೆಯಾಗಿದ್ದು, ಇನ್ನುಳಿದಂತೆ ಎಲ್ಲಾ ಕಡೆಗಳಲ್ಲಿ ತುಂತುರು ಮಳೆಯಾಗಿದೆ. ನಿನ್ನೆ ಹೆಚ್ಚಿನ ಮಳೆಯಾದ ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಸಂಜೆ ವೇಳೆಗೆ ನೆರೆ ನೀರು ಇಳಿದು, ಮಳೆಯೂ ಕಡಿಮೆಯಾಗಿತ್ತು.

ಹಾವೇರಿಯಲ್ಲಿ ಆಗಾಗ ತುಂತುರು ಮಳೆ ಆಗುತ್ತಿದೆ. ಮೋಡಕವಿದ ವಾತಾವರಣದೊಂದಿಗೆ ಆಗಾಗ ಬೀಳ್ತಿರೋ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಮತ್ತೆ ತನ್ನ ಆರ್ಭಟ ಮುಂದುವರೆಸಿದ್ದಾನೆ. ಮೋಡಕವಿದ ವಾತಾವರಣದೊಂದಿಗೆ ಬೀಳ್ತಿರೋ ತುಂತುರು ಮಳೆ ಜಿಲ್ಲೆಯ ರೈತರಲ್ಲಿ ಆತಂಕ ಮೂಡಿಸಿದೆ.

ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಹಲವೆಡೆ ಬಿಟ್ಟು ಬಿಟ್ಟು ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು. ಕ್ವೀನ್ಸ್ ರೋಡ್‍ನ ಗಲ್ಲಿಯೊಂದರಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ, ಜನ ಪರದಾಡಿದ್ರು. ರಸ್ತೆ ಕೆರೆಯಂತೆ ಆಗಿತ್ತು. ವಿಜಯಪುರದಲ್ಲಿ ಭಾರೀ ಮಳೆಗೆ ಭೀಮಾನದಿ ಅಪಾಯಮಟ್ಟ ಮೀರಿದೆ.

ಒಟ್ಟಾರೆ ರಾಜ್ಯಾದ್ಯಂತ ಮಳೆ ಮುಂದುವರಿದಿದ್ದು ನದಿ, ಹಳ್ಳ, ಕೊಳ್ಳಗಳು ತುಂಬಿದ್ದು ಮಳೆ ಜಾಸ್ತಿಯಾದ್ರೆ ರೈತರು ಸಂಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಲಿದೆ.

Comments

Leave a Reply

Your email address will not be published. Required fields are marked *