ರಾಜ್ಯಸಭಾ ಟಿಕೆಟ್- ಪ್ರಭಾಕರ ಕೋರೆ ಪರ ಡಿಸಿಎಂ ಲಕ್ಷ್ಮಣ ಸವದಿ ಬ್ಯಾಟಿಂಗ್

ಚಿಕ್ಕೋಡಿ: ಬಿಜೆಪಿಯಲ್ಲಿ ರಾಜ್ಯಸಭಾ ಟಿಕೆಟ್ ಗೊಂದಲದ ವಿಚಾರವಾಗಿ ಶಾಸಕ ಉಮೇಶ ಕತ್ತಿ ಕುಟುಂಬ ಹಾಗೂ ಸವದಿ ಕುಟುಂಬದ ನಡುವೆ ಯಾವುದೂ ಸರಿಯಿಲ್ಲ ಎಂಬುದನ್ನು ಸ್ವತಃ ಡಿಸಿಎಂ ಲಕ್ಷ್ಮಣ ಸವದಿ ಸಾಬೀತು ಪಡಿಸಿದ್ದಾರೆ.

ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಟಿಕೆಟ್‍ನ್ನು ಹಾಲಿ ಇರುವ ಪ್ರಭಾಕರ ಕೋರೆ ಅವರಿಗೆ ನೀಡಬೇಕು ಎಂದು ಕೋರೆ ಪರ ಬ್ಯಾಟ್ ಬೀಸಿದ್ದಾರೆ.ಪ್ರಭಾಕರ ಕೋರೆ ಹಿರಿಯರು, ಅವರ ಬಗ್ಗೆ ಸಹಾನೂಭೂತಿ ಇರಲಿ. ಬೆಳಗಾವಿ, ಬಾಗಲಕೋಟೆ, ವಿಜಯಪೂರದ ಕೆಲ ಶಾಸಕರು ಕೋರೆ ಅವರನ್ನೇ ಮುಂದುವರೆಸುವಂತೆ ಸಿಎಂ ಯಡಿಯೂರಪ್ಪ ಬಳಿ ಮನವಿ ಮಾಡಿದ್ದೇವೆ ಎಂದು ಡಿಸಿಎಂ ಹೇಳಿದ್ದಾರೆ. ಆದರೂ ಈ ಬಗ್ಗೆ ಅಂತಿಮವಾಗಿ ಹೈ ಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು
ಪರೋಕ್ಷವಾಗಿ ಮಾಜಿ ಸಂಸದ ರಮೇಶ ಕತ್ತಿ ರಾಜ್ಯಸಭೆ ಎಂಟ್ರಿಗೆ ಲಕ್ಷ್ಮಣ ಸವದಿ ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರಭಾಕರ ಕೋರೆ ಅವರ ರಾಜ್ಯಸಭೆ ಟಿಕೆಟ್ ತಪ್ಪಿಸಿ ಮಾಜಿ ಸಂಸದ, ಸಹೋದರ ರಮೇಶ ಕತ್ತಿಗೆ ನೀಡುವಂತೆ ಶಾಸಕ ಉಮೇಶ ಕತ್ತಿ ಪಟ್ಟು ಹಿಡಿದಿದ್ದು, ಬೆಳಗಾವಿ ರಾಜಕಾರಣ ರಾಜ್ಯ ರಾಜಕಾರಣನ್ನು ಯಾವ ಹಂತಕ್ಕೆ ಕೊಂಡೊಯಲಿದೆ ಎಂಬುವದನ್ನ ಕಾದು ನೋಡಬೇಕಿದೆ.

ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಉಮೇಶ ಕತ್ತಿ ಸಭೆ ನಡೆಸಿದ ವಿಚಾರವಾಗಿ ಮಾತನಾಡಿದ ಅವರು, ಕೇವಲ ಊಟಕ್ಕಾಗಿ ಅವರು ಸಭೆ ನಡೆಸಿದ್ದಾರೆ. ಅದಕ್ಕೆ ರೆಕ್ಕೆಪುಕ್ಕ ಕಟ್ಟುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *