ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಘೋಷಣೆ- ಸಂಪುಟ ಅಸ್ತು

ಬೆಂಗಳೂರು: ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಶೀಘ್ರದಲ್ಲೇ ಜನ್ಮ ತಾಳಲಿದೆ. ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನೂತನ ಜಿಲ್ಲೆ ರಚನೆಗೆ ತಾತ್ವಿಕ ಅನುಮೋದನೆ ಬರುತ್ತಿದೆ.

ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಮಧುಸ್ವಾಮಿ, ವಿಜಯನಗರ ಜಿಲ್ಲೆ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ಅನೌಪಚಾರಿಕ ಒಪ್ಪಿಗೆ ನೀಡಲಾಗಿದ್ದು, ಮುಂದಿನ ಸಭೆಯಲ್ಲಿ ಅಧಿಕೃತ ಅನುಮೋದನೆ ಸಿಗಲಿದೆ. ಜಿಲ್ಲೆಯ ರಚನೆ ಸಂಬಂಧ ಪ್ರಕ್ರಿಯೆ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಚಳಿಗಾಲ ಅಧಿವೇಶನ: ಡಿಸೆಂಬರ್ 7ರಿಂದ 15ರವರೆಗೆ ವಿಧಾನಸಭೆಯ ಚಳಿಗಾಲದ ಅಧಿವೇಶನ ಬೆಂಗಳೂರಲ್ಲಿ ನಡೆಯಲಿದೆ.

ಮರಾಠ ಅಭಿವೃದ್ಧಿ ಪ್ರಾಧಿಕಾರ ಅಲ್ಲ, ಸಮುದಾಯ ನಿಗಮ:
ಮರಾಠ ಅಭಿವೃದ್ಧಿ ಪ್ರಾಧಿಕಾರದ ಹೆಸರು ಬದಲಾವಣೆಗೆ ನಿರ್ಧರಿಸಿದ್ದು, ಇನ್ನು ಮುಂದೆ ‘ಮರಾಠ ಸಮುದಾಯ ನಿಗಮ’ ಎಂದು ಬದಲಾವಣೆಯಾಗಲಿದೆ.

ಮರಾಠ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರಾಧಿಕಾರ ಮಾಡಬೇಕಾದರೆ ಕಾನೂನು ಮಾಡಬೇಕು. ಆದರೆ ನಿಗಮಕ್ಕೆ ಸರ್ಕಾರವೇ ನಿರ್ಧಾರ ಕೈಗೊಳ್ಳಬಹುದು. ಹಣ ಎಷ್ಟು ನಿಗದಿ ಮಾಡಬೇಕು ಎಂಬುದು ಇನ್ನೂ ಚರ್ಚೆಯಾಗಿಲ್ಲ. ಒಂದು ಸಮುದಾಯದ ಅಭಿವೃದ್ಧಿ ವಿಷಯದಲ್ಲಿ ಯಾಕೆ ವಿರೋಧ ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೂ ಅಭಿವೃದ್ಧಿಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಪ್ರವಾಹ ಪೀಡಿತ ಜಿಲ್ಲೆಗಳಿಗೆ 1000 ಕೋಟಿ ರೂ. ಬಿಡುಗಡೆ ಮಾಡಿ ಪರಿಹಾರ ಕಾಮಗಾರಿ ಕೈಗೊಳ್ಳಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.

ಎಸ್‍ಸಿ- ಎಸ್‍ಟಿ ಮೀಸಲಾತಿ ಹೆಚ್ಚಳ ವಿಚಾರದ ಬಗ್ಗೆ ಮಾತನಾಡಿ, ಮೀಸಲಾತಿ ಹೆಚ್ಚಳ ಸಂಬಂಧ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಲಾಗುತ್ತದೆ. ಒಂದು ವಾರದಲ್ಲಿ ಸಮಿತಿ ರಚನೆ ಮಾಡಲಾಗುತ್ತದೆ. ಸಮಿತಿ ವರದಿ ಆಧರಿಸಿ ಮೀಸಲು ಹೆಚ್ಚಳ ಮಾಡಲಾಗುತ್ತದೆ ಎಂದರು.

ಕೃಷ್ಣಾ ಭಾಗ್ಯ ಜಲ ನಿಗಮ, ಕಾವೇರಿ ಅಭಿವೃದ್ಧಿ ನಿಗಮ ಮತ್ತು ವಿಶ್ವೇಶ್ವರಯ್ಯ ಅಭಿವೃದ್ಧಿ ನಿಗಮಕ್ಕೆ ಸಾಲ ಪಡೆಯಲು ಅನುಮತಿ ನೀಡಲಾಗಿದೆ. ಹೊಸಪೇಟೆಯಲ್ಲಿ 13 ಕೋಟಿ ಅಂದಾಜು ವೆಚ್ಚದಲ್ಕಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು. ಎಸ್‍ಸಿ-ಎಸ್‍ಟಿಗೆ ಮೀಸಲು ಪ್ರಮಾಣ ಹೆಚ್ಚಳ ನಿಗದಿಗೆ ಸಚಿವ ಸಂಪುಟ ಉಪಸಮಿತಿ ರಚನೆ ಮಾಡಲು ಸಿಎಂಗೆ ಅಧಿಕಾರ ನೀಡಲಾಗುವುದು ಎಂದರು.

ಸಾಲಿನಲ್ಲಿ 21 ಸಾರ್ವತ್ರಿಕ ರಜೆ ಮತ್ತು19 ನಿರ್ಬಂಧಿತ ರಜೆ ನೀಡಲು ಅನುಮೋದನೆ ಸಿಕ್ಕಿದ್ದು, ಲೋಕಸೇವಾ ಆಯೋಗದ ಅನುಮತಿ ಇಲ್ಲದೆ ಸರ್ಕಾರಿ ನೌಕರರ ಮೇಲೆ ಕ್ರಮ ಕೈಗೊಳ್ಳಲು ನಿಯಮಾವಳಿ ತಿದ್ದುಪಡಿ ಮಾಡಲಾಗುತ್ತದೆ ಎಂದು ನುಡಿದರು.

Comments

Leave a Reply

Your email address will not be published. Required fields are marked *