ರಾಜ್ಯದ ಹಲವೆಡೆ ವರುಣನ ಅಬ್ಬರ- ಮರ, ವಿದ್ಯುತ್ ಕಂಬಗಳು ಧರಶಾಯಿ

ಬೆಂಗಳೂರು: ರಾಜ್ಯದ ಮಲೆನಾಡು, ಉತ್ತರ ಕರ್ನಾಟಕ ಸೇರಿದಂತೆ ಬಹುತೇಕ ಕಡೆ ವರುಣ ಅಬ್ಬರಿಸಿ ಬೊಬ್ಬಿರಿದಿದ್ದು, ಅಕಾಲಿಕ ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಬೆಳೆಗಳು ಸಂಪೂರ್ಣ ನಾಶವಾಗಿವೆ.

ಮಲೆನಾಡಲ್ಲಿ ಬಿರುಗಾಳಿ ಸಹಿತ ಮಳೆಗೆ ಮರ, ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಕಾಫಿ ಬೆಳೆ ನಾಶವಾಗಿದೆ. ಮೂಡಿಗೆರೆ ಸಮೀಪದ ಸಬ್ಬೇನಹಳ್ಳಿ-ಬೆಟ್ಟಗೇರಿ ರಸ್ತೆಯಲ್ಲಿ ವಿದ್ಯುತ್ ಕಂಬಗಳು ರಸ್ತೆಗೆ ಉರುಳಿದ್ದು, ಚಿಕ್ಕಮಗಳೂರು ತಾಲೂಕಿನ ಹುಣಸೆಹಳ್ಳಿಯಲ್ಲಿ ರಸ್ತೆಯ ಮೇಲೆ ಮಳೆ ನೀರು ಹರಿದಿದೆ. ಧಾರಾಕಾರ ಮಳೆಗೆ ಭತ್ತ, ಕಾಫಿ ಬೆಳೆ ಸಂಪೂರ್ಣ ನಾಶವಾಗಿದೆ. ಮಳೆಯ ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಸಂಜೆ ಸುರಿದ ಭಾರಿ ಮಳೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ನೀರು ಪಾಲಾಗಿದೆ. ಆಲ್ದೂರು ಸಮೀಪದ ಇಳೇಕಾನ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಆಲ್ದೂರು ಸಮೀಪದ ಇಳೇಖಾನ್ ಗ್ರಾಮದ ತೋಟದ ಕಣದಲ್ಲಿದ್ದ ಹಲವರ ಕಾಫಿ ನೀರುಪಾಲಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ಸೇರಿದಂತೆ ತಾಲೂಕಿನ ಹಲವೆಡೆ ಮಳೆಯಾಗಿದೆ. ಸಾಗರದ ಟಿವಿಎಸ್ ಶೋರೂಂ ಪಕ್ಕದ ರಸ್ತೆಯಲ್ಲಿ ಮಳೆಗೆ ನೀರಿಗೆ ರಸ್ತೆ ಕೆರೆಯಂತಾಗಿತ್ತು. ವಾಹನ ಸವಾರರು ಪರದಾಡುವಂತಾಯಿತು. ಯುಜಿಡಿ ಕಾಮಗಾರಿಗೆ ಅಗೆದಿದ್ದ ಗುಂಡಿಗೆ ಟಿಪ್ಪರ್ ವಾಹನ ಸಿಲುಕಿ ಅವಾಂತರ ಸೃಷ್ಟಿಯಾಗಿತ್ತು.

ಇತ್ತ ಉತ್ತರ ಕರ್ನಾಟಕದ ಧಾರವಾಡ ನಗರದಲ್ಲಿ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೆ ಜನ್ನತ್ ನಗರ ಶಿವಾನಂದ ಕಾಲನಿಯಲ್ಲಿ ಮಳೆ ನೀರಿನ ರಭಸಕ್ಕೆ ಬೈಕ್‍ಗಳು ತೇಲಿ ಹೋಗಿವೆ. ಬಿಆರ್ ಟಿಎಸ್ ಕಾರಿಡಾರಿಂದ ಮಳೆ ನೀರು ಏಕಾಏಕಿ ಹರಿದು ಬಂದ ಪರಿಣಾಮ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗಳು ಕೊಚ್ಚಿ ಹೋಗಿವೆ.

ಧಾರವಾಡ ನಗರದ ಕಂಠಿ ಓಣಿ, ಜನ್ನತನಗೆ, ಲಕ್ಷ್ಮಿಸಿಂಗನಕೇರಿ, ಮದಿಹಾಳ ಸೇರಿ ಹಲವು ಕಡೆ ಮನೆಗಳಿಗೆ ನೀರು ನುಗ್ಗಿದೆ. ಕಾಂಪ್ಲೆಕ್ಸ್ ಗಳಿಗೆ ನೀರು ನುಗ್ಗಿದ್ದರಿಂದ ಝರಾಕ್ಸ್ ಮಷೀನ್, ಕಂಪ್ಯೂಟರ್‍ಗಳು ನೀರಿನಲ್ಲಿ ತೆಲುತ್ತಿರುವ ದೃಶ್ಯ ಕಂಡು ಬಂತು. ಮಳೆ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಈ ರೀತಿ ಆಗುತ್ತಿದೆ ಎಂದು ಮಹಿಳೆಯರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಧಾರವಾಡ ನಗರ ಮಾತ್ರವಲ್ಲದೆ ಜಿಲ್ಲೆಯ ಅಳ್ನಾವರ, ನವಲಗುಂದ ತಾಲೂಕಿನಲ್ಲಿ ಸಹ ಭರ್ಜರಿ ಮಳೆಯಾಗಿದೆ. ಹುಬ್ಬಳ್ಳಿಯ ಗಣೇಶ ನಗರದ ಹಲವು ಮನೆಗಳಿಗೆ ಸಹ ನೀರು ನುಗ್ಗಿದೆ.

ಹಾವೇರಿ ಜಿಲ್ಲೆಯಲ್ಲಿ ಸಹ ಧಾರಾಕಾರವಾಗಿ ಮಳೆ ಸುರಿದಿದ್ದು, ಹಿರೇಕೆರೂರು, ಹಾವೇರಿ, ಹಾನಗಲ್, ರಟ್ಟೀಹಳ್ಳಿ, ಸವಣೂರು ತಾಲೂಕಿನ ಹಲವೆಡೆ ಭಾರೀ ಮಳೆಯಾಗಿದೆ. ಅಕಾಲಿಕ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಜೋಳ, ಹತ್ತಿ, ಸೇರಿದಂತೆ ವಿವಿಧ ಬೆಳೆ ಹಾನಿಯಾಗಿವೆ. ಹಾವೇರಿ ನಗರದಲ್ಲಿ ಸಹ ಜಿಟಿಜಿಟಿ ಮಳೆ ಇತ್ತು. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸುತ್ತಮುತ್ತ ಭಾರೀ ಮಳೆಯಾಗಿದೆ. ಲಕ್ಷ್ಮೇಶ್ವರ ತಾಲೂಕಿನಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಮಳೆ ಸುರಿದಿದೆ. ತಗ್ಗು ಪ್ರದೇಶದ ಮನೆಗಳಿಗೆ ಮಳೆ, ಚರಂಡಿ ನೀರು ನುಗ್ಗಿದೆ.

ದಾವಣಗೆರೆಯ ಹರಿಹರ, ಹೊನ್ನಾಳಿ, ಹರಪ್ಪನಹಳ್ಳಿ, ಜಗಳೂರು, ಮಾಯಕೊಂಡ ತಾಲುಕಿನಲ್ಲಿ ಮಳೆಯಾಗಿದೆ. ಅಲ್ಲದೆ ನಗರದ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಶಾಮನೂರಿನಲ್ಲಿ ಮನೆಯ ಮೇಲ್ಚಾವಣಿಗೆ ಸಿಡಿಲು ಬಡಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬಿಡಿ ಲೇಔಟ್ ನಲ್ಲಿ ವಿದ್ಯುತ್ ಕಂಬ ನೆಲಕ್ಕೆ ಉರುಳಿದೆ. ಭಾರೀ ಮಳೆಗೆ ಅಪಾರ ಪ್ರಮಾಣದ ನೀರು ರಸ್ತೆಗೆ ನುಗ್ಗಿದೆ. ರಸ್ತೆ ಕಾಣದೆ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಕಾರು ಗುಂಡಿಯೊಳಗೆ ನುಗ್ಗಿದೆ. ಉಳಿದಂತೆ ಮಡಿಕೇರಿ, ಬಾಗಲಕೋಟೆ, ತುಮಕೂರು, ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಮಳೆ ಸುರಿದಿದೆ.

Comments

Leave a Reply

Your email address will not be published. Required fields are marked *