ರಾಜ್ಯದ ಹಲವೆಡೆ ಧಾರಾಕಾರ ಮಳೆ- ಡ್ಯಾಂ ಭರ್ತಿಯಾಗಿ ರಸ್ತೆಯ ಮೇಲೆ ನೀರು

– ರೈತರ ಮೊಗದಲ್ಲಿ ಸಂತಸ
– ಆನೇಕಲ್‍ನಲ್ಲಿ ಟ್ರಾಫಿಕ್ ಜಾಮ್

ಬೆಂಗಳೂರು: ರಾಜ್ಯದ ಹಲವೆಡೆ ಅನೇಕ ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಸಂತಸ ಮೂಡುತ್ತಿದೆ. ಮತ್ತೊಂದೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರ ಜೀವನ ಅಸ್ತವ್ಯಸ್ತವಾಗಿದೆ.

ಹಾವೇರಿ ಜಿಲ್ಲೆಯಾದ್ಯಂತ ಕಳೆದ ರಾತ್ರಿ ಧಾರಾಕಾರವಾಗಿ ಮಳೆಯಾಗಿದೆ. ಜಿಲ್ಲೆಯ ರಾಣೇಬೆನ್ನೂರಿನ ಮೃತ್ಯುಂಜಯ ನಗರ ಸೇರಿದಂತೆ ಹಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಮನೆಗೆ ನುಗ್ಗಿದ ನೀರು ಹೊರಹಾಕಲು ಜನರು ಹರಸಾಹಸಪಟ್ಟಿದ್ದಾರೆ. ಒಂದು ಗಂಟೆ ಕಾಲ ಸುರಿದ ಮಳೆಯಿಂದ ಕೆಲಕಾಲ ಜನಜೀವನ ಅಸ್ತವ್ಯಸ್ತವಾಗಿತ್ತು. ಅಲ್ಲದೆ ಹಾವೇರಿ ತಾಲೂಕು ಸೇರಿದಂತೆ ಬ್ಯಾಡಗಿ ವಿವಿಧ ಗ್ರಾಮದಲ್ಲಿ ಉತ್ತಮ ಮಳೆ ಆಗಿದೆ. ಕಳೆದ ಒಂದು ವಾರದಿಂದ ಮಳೆ ಇಲ್ಲದೆ ಜಿಲ್ಲೆಯ ಜನರು ಆತಂಕಗೊಂಡಿದ್ದರು. ಇದೀಗ ಮಳೆಯಿಂದ ಜಿಲ್ಲೆಯ ಜನರು ಸಂತಸಗೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯಾದ್ಯಂತ ತಡರಾತ್ರಿ ಸುರಿದ ಮಳೆಯಿಂದಾಗಿ ಹಿರೇಹಳ್ಳ ಮೈದುಂಬಿ ಹರಿಯುತ್ತಿದೆ. ಹೊಸದುರ್ಗ ತಾಲೂಕಿನ ಗೂಳಿಹಟ್ಟಿ ಸಮೀಪದಲ್ಲಿರುವ ಹಿರೇಹಳ್ಳ ಚೆಕ್ ಡ್ಯಾಂ ಭರ್ತಿಯಾಗಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ.

ಗಡಿ ಜಿಲ್ಲೆ ಚಾಮರಾಜನಗರದ ಹಲವೆಡೆ ಕಳೆದ ರಾತ್ರಿಯಿಡಿ ಸೋನೆ ಮಳೆಯಾಗಿದೆ. ಗುರುವಾರ ಸಂಜೆ ಆರಂಭವಾದ ತುಂತುರು ಮಳೆ ರಾತ್ರಿಯಿಡಿ ಬಿದ್ದಿದೆ. ಜಿಲ್ಲೆಯ ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ಸೇರಿದಂತೆ ಹಲವೆಡೆ ಮಳೆಯಾಗಿದ್ದು, ರೈತರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಇಂದು ಕೂಡ ಚಾಮರಾಜನಗರದಲ್ಲಿ ಮೋಡ ಮುಸುಕಿದ ವಾತಾವರಣ ಮುಂದುವರಿದಿದ್ದು, ಮಳೆ ಬೀಳುವ ಸಾಧ್ಯತೆಯಿದೆ.

ಕಲಬುರಗಿ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ಎರಡು ಗಂಟೆಗಳ ಕಾಲ ಸತತ ಮಳೆಯಾಗಿದ್ದು, ಈ ಮೂಲಕ ಬಿಸಿಲಿನಿಂದ ಕಂಗೆಟ್ಟ ಜನರಿಗೆ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ವಾಡಿಕೆ ಪ್ರಕಾರ ಜೂನ್ ಎರಡನೇ ವಾರದಲ್ಲಿ ಜಿಲ್ಲೆಯಲ್ಲಿ ಮಳೆಯಾಗುತ್ತಿತ್ತು. ಆದರೆ ಈ ಬಾರಿ ವಾಡಿಕೆಯಂತೆ ಜಿಲ್ಲೆಯಲ್ಲಿ ಮಳೆಯಾಗಿಲ್ಲ. ಮುಂದಿನ ವಾರದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇನ್ನೂ ಗದಗ ಜಿಲ್ಲೆಯಲ್ಲೂ ವರುಣನ ಸಿಂಚನ ಶುರುವಾಗಿದೆ. ತಡರಾತ್ರಿಯಿಂದ ತುಂತುರು ಮಳೆ ಆರಂಭವಾಗಿದ್ದು, ಬಿಸಿಲು, ಧೂಳುನಿಂದ ಕಂಗೆಟ್ಟ ಜನ್ರಿಗೆ ತುಂತುರು ಮಳೆ ಸ್ವಲ್ಪ ತಂಪೆರೆದಂತಾಗಿದೆ. ರೈತರು ಮುಂಗಾರು ಬಿತ್ತನೆಗೆ ಮುಗಿಲಾಚೆ ನೋಡುವಂತಾಗಿತ್ತು. ಸದ್ಯ ಮಳೆ ಆರಂಭವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಧಾರವಾಡದಲ್ಲಿ ಕೂಡ ಧಾರಾಕಾರ ಮಳೆ ಸುರಿದಿದೆ. ಗುಡುಗು ಸಿಡಲು ಸಹಿತ ಸುರಿದ ಮಳೆಯಿಂದ ರೈತರು ಕೊಂಚ ನೆಮ್ಮದಿಯ ನಿಟ್ಡುಸಿರು ಬಿಟ್ಟಿದ್ದಾರೆ. ಹೊಲಗಳಲ್ಲಿ ಬಿತ್ತನೆ ಮಾಡಿದ್ದ ರೈತರಿಗೆ ಮಳೆ ಇಲ್ಲದ ಕಾರಣ ಕಂಗಾಲಾಗಿದ್ದರು. ಈ ಮಳೆಯಿಂದ ರೈತರು ಕೊಂಚ ಸಮಾಧಾನವಾಗುವಂತೆ ಆಗಿದೆ.

ಟ್ರಾಫಿಕ್ ಜಾಮ್:
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಕೊಪ್ಪಗೇಟ್ ಬಳಿ ರಾತ್ರಿ ಸುರಿದ ಧಾರಾಕಾರ ಮಳೆಗೆ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದವು. ರಸ್ತೆಗೆ ಅಡ್ಡಲಾಗಿ ವಿದ್ಯುತ್ ತಂತಿಗಳು ಬಿದ್ದಿದ್ದರಿಂದ ಕಿ.ಮೀವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಗಂಟೆಗಟ್ಟಲೇ ಟ್ರಾಫಿಕ್ ಜಾಮ್‍ನಲ್ಲಿ ವಾಹನ ಸವಾರರು ಪರದಾಡುವಂತಾಗಿತ್ತು. ಅಲ್ಲದೇ ಟ್ರಾಫಿಕ್ ಜಾಮ್‍ನಿಂದ ಕೊಪ್ಪ ಗೇಟ್ ಗ್ರಾಮದ ಪುಟ್ಟ ರಸ್ತೆಗಳಲ್ಲಿ ಬೈಕ್ ಮತ್ತು ಕಾರುಗಳ ಓಡಾಟಕ್ಕೆ ಸ್ಥಳೀಯರ ವಿರೋಧ ವ್ಯಕ್ತಪಡಿಸಿದ್ದಾರೆ. ಕೊನೆಗೆ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಬಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಕಂಬ ಮತ್ತು ತಂತಿಗಳನ್ನು ತೆರವು ಮಾಡಿದರು.

Comments

Leave a Reply

Your email address will not be published. Required fields are marked *