ರಾಜ್ಯದಲ್ಲಿ ಸೆಮಿ ಲಾಕ್‍ಡೌನ್ ಜಾರಿ – ಸಿಎಂ ಜೊತೆ ಚರ್ಚಿಸಿ ತೀರ್ಮಾನ

ಹುಬ್ಬಳ್ಳಿ: ರಾಜ್ಯದಲ್ಲಿ ಕೊರೊನಾದ 2ನೇ ಅಲೆ ತೀವ್ರಗೊಳ್ಳುತ್ತಿದೆ. ಕೊರೊನಾ ಹರಡುವುದನ್ನ ತಡೆಗಟ್ಟಲು ತಜ್ಞರ ಸಮಿತಿ ನೈಟ್ ಕಫ್ರ್ಯೂ, ಸೆಮಿ ಲಾಕ್ ಡೌನ್ ಜಾರಿ ಮಾಡುವ ಬಗ್ಗೆ ಸಲಹೆ ನೀಡಿದ್ದಾರೆ. ಆದರೆ ನಾವು ಕೊರೊನಾ ಮಧ್ಯೆಯೇ ಬದುಕಬೇಕಾಗಿದೆ. ಹೀಗಾಗಿ ಸಿಎಂ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಕಳೆದ ರಾತ್ರಿ ಗ್ರಾಮ ವಾಸ್ತವ್ಯ ಮಾಡಿದ ಕಂದಾಯ ಸಚಿವ ಅಶೋಕ್ ಇಂದು ಮುಂಜಾನೆ ಗ್ರಾಮದಲ್ಲಿ ವಾಕಿಂಗ್ ನಡೆಸಿ, ಫಕ್ಕೀರಪ್ಪ ಕಾಳೆ ಎಂಬವರ ಮನೆಯಲ್ಲಿ ಉಪಹಾರ ಸೇವಿಸಿದರು.

ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಶೋಕ್, ಸೆಮಿ ಲಾಕ್ ಡೌನ್ ಮಾಡುವ ಬಗ್ಗೆ ತಜ್ಞರಿಂದ ಸಲಹೆ ಬಂದಿದೆ. ಈ ಕುರಿತು ನಾನು ಈಗಾಗಲೇ ಬೆಂಗಳೂರು ಪಾಲಿಕೆ ಕಮೀಷನರ್ ಜೊತೆಯೂ ಚರ್ಚೆ ನಡೆಸಿದ್ದೇನೆ. ನಾವೆಲ್ಲಾ ಕೊರೊನಾ ಮಧ್ಯೆಯೇ ಬದುಕಬೇಕಾಗಿದೆ. ಇನ್ನೊಂದು ವಾರ ಬಿಟ್ಟು ಪರಿಸ್ಥಿತಿ ಅವಲೋಕಿಸಿ ಸೆಮಿ ಲಾಕ್‍ಡೌನ್ ಜಾರಿ ಮಾಡುವ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಂತಾ ಗ್ರಾಮ ವಾಸ್ತವ್ಯ ಕೈಗೊಂಡಿರುವುದು ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಗ್ರಾಮ ವಾಸ್ತವ್ಯದಿಂದ ಅಧಿಕಾರಿಗಳು ಹಾಗೂ ಜನಸಾಮಾನ್ಯರ ಮಧ್ಯದ ಕಂದಕ ಕಡಿಮೆ ಆಗಲಿದೆ. ಈ ಗ್ರಾಮ ವಾಸ್ತವ್ಯಕ್ಕೆ ವಿರೋಧ ಪಕ್ಷದ ಶಾಸಕರು ನಾಯಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರ್ಕಾರ ಜನರ ಮನೆ ಬಾಗಲಿಗೆ ಕೊಂಡೊಯ್ಯುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಅಶೋಕ್ ಹರ್ಷ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *