ರಾಜ್ಯದಲ್ಲಿ ಲಾಕ್‍ಡೌನ್ ಇಲ್ಲ, ಕಠಿಣ ಕ್ರಮ: ಸುಧಾಕರ್ ಸ್ಪಷ್ಟನೆ

– ಔಷಧಿ, ಲಸಿಕೆಯ ಕೊರತೆ ಇಲ್ಲ

ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ಇಲ್ಲ. ಆದರೆ ಲಾಕ್‍ಡೌನ್ ಹೊರತುಪಡಿಸಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಆರೋಗ್ಯ ಸಚಿವರಾದ ಸುಧಾಕರ್ ಸ್ಪಷ್ಟನೆ ಕೊಟ್ಟಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾನುವಾರ ಸಂಜೆ 4 ಗಂಟೆಗೆ ಸರ್ವ ಪಕ್ಷಗಳ ಸಭೆ ಸಿಎಂ ಕರೆದಿದ್ದಾರೆ. ಸಭೆ ಮಾಡಿ ವಿಪಕ್ಷಗಳ ಸಲಹೆ ಪಡೆಯುತ್ತೇವೆ. ರಾಜ್ಯದಲ್ಲಿ ಔಷಧಿ, ಲಸಿಕೆ ಕೊರತೆ ಇಲ್ಲ. ಕೊರತೆ ಆಗದಂತೆ ಎಲ್ಲಾ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಮಹಾರಾಷ್ಟ್ರ ಮಾದರಿ ಟಫ್ ರೂಲ್ಸ್ ಜಾರಿ ವಿಚಾರವಾಗಿ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್ ಅವರು, ನಿನ್ನೆ ಸಿಎಂ ಯಡಿಯೂರಪ್ಪ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಮಾಡಿದ್ದಾರೆ. ರಾಜ್ಯದಲ್ಲಿ ಸೋಂಕು, ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ. ಸಾವಿನ ಪ್ರಮಾಣ ಕಳೆದ ವರ್ಷದಷ್ಟೆ ಆಗುತ್ತಿದೆ. ಈ ನಿಟ್ಟಿನಲ್ಲಿ ಸಿಎಂ ಸಭೆ ಮಾಡಿದ್ದಾರೆ. ಲಾಕ್‍ಡೌನ್ ಹೊರತು ಪಡಿಸಿ ಬಿಗಿಯಾದ ಕ್ರಮ ತೆಗೆದುಕೊಳ್ಳಬೇಕಾಗಿದೆ. ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಅಂತ ಚರ್ಚೆ ಆಗಿದೆ. ಸಿಎಂ ಎರಡು ದಿನ ಪ್ರವಾಸ ಇದ್ದಾರೆ. ಪ್ರವಾಸ ಮುಗಿಸಿ ವಾಪಸ್ ಬಂದ ಬಳಿಕ ಕಠಿಣ ನಿಯಮಗಳ ಕುರಿತು ಕ್ರಮ ತಗೋತೀವಿ ಎಂದು ತಿಳಿಸಿದ್ದಾರೆ.

ಭಾನುವಾರ ಸರ್ವ ಪಕ್ಷಗಳ ಸಭೆಯನ್ನು ಸಿಎಂ ಕರೆದಿದ್ದಾರೆ. ಅ ಸಭೆಯಲ್ಲಿ ಎಲ್ಲಾ ಪಕ್ಷಗಳ ಸಲಹೆಗಳನ್ನು ಪಡೆಯುತ್ತೇವೆ. ಸರ್ಕಾರ ಒಂದೇ ಈ ಕೆಲಸ ಮಾಡೋದಲ್ಲ. ಎಲ್ಲರೂ ಈ ಕೆಲಸಕ್ಕೆ ಕೈ ಜೋಡಿಸಬೇಕಾಗಿದೆ. ಹೀಗಾಗಿ ವಿಪಕ್ಷ ಸಭೆ ಕರೆಯಲಾಗಿದೆ ಎಂದಿದ್ದಾರೆ.

ಮದುವೆ ಸೇರಿದಂತೆ ಜನ ಸೇರುವ ಸಮಾರಂಭಗಳಿಗೆ ಕಡಿವಾಣ ಹಾಕಬೇಕಾಗಿದೆ. ಜನರೇ ಸ್ವಯಂ ಆಗಿ ನಿರ್ಬಂಧ ಹಾಕಿಕೊಳ್ಳಬೇಕು. ಜನರೇ ಜನತಾ ಕಫ್ರ್ಯೂಗೆ ಕೈ ಜೋಡಿಸಬೇಕು. ನೈಟ್ ಕಫ್ರ್ಯೂ ಸಮಯ ಬದಲಾವಣೆ ಮಾಡುವ ವಿಚಾರವಾಗಿ ಸಿಎಂ ಜೊತೆ ಚರ್ಚೆ ಮಾಡಿ ಈ ಬಗ್ಗೆ ಅಂತಿಮ ನಿರ್ಧಾರ ಮಾಡುತ್ತೆವೆ ಎಂದರು.

Comments

Leave a Reply

Your email address will not be published. Required fields are marked *