ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ-ಚಿಕ್ಕೋಡಿಯಲ್ಲಿ ಸೇತುವೆ ಮುಳುಗಡೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರುದ್ರನರ್ತನ ಮುಂದುವರಿದಿದೆ. ಈಗ ಮುಂಗಾರು ಮಳೆಯ ಅಬ್ಬರವೂ ಜೋರಾಗಿದ್ದು, ಕೆಲವೊಂದಿಷ್ಟು ಜಿಲ್ಲೆಯ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಒಂದು ಕಡೆ ಕೊರೊನಾ ತಾಂಡವವಾಡ್ತಿದ್ರೆ, ಮತ್ತೊಂದೆಡೆ ಮಳೆರಾಯ ಅಬ್ಬರಿಸುತ್ತಿದ್ದಾನೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ 2 ಸೇತುವೆಗಳು ಮುಳುಗಡೆಯಾಗಿವೆ. ಚಿಕ್ಕೋಡಿಯ ಬೋಜ್ ಕಾರದಗಾ ಗ್ರಾಮದ ನಡುವಿನ ಕೆಳ ಹಂತದ ಸೇತುವೆ ಹಾಗೂ ಕುನ್ನೂರ- ಬಾರವಾಡ ಗ್ರಾಮದ ನಡುವಿನ ಸೇತುವೆ ಮುಳುಗಡೆಯಾಗಿದ್ದು, ಜನ ಪರ್ಯಾಯ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಸೇತುವೆಯ 2 ಬದಿಯಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸೇತುವೆ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಭಾಗದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಆತಂಕ ಮನೆ ಮಾಡಿದೆ.

ಕರಾವಳಿಯಲ್ಲಿ ಅರಬ್ಬೀ ಸಮುದ್ರದ ರೌದ್ರಾವತಾರ: ಕರಾವಳಿಯಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಅರಬ್ಬೀ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಅಬ್ಬರಿಸುತ್ತಿದ್ದು, ಮಂಗಳೂರಿನ ಹೊರವಲಯದ ಸೋಮೇಶ್ವರ ಪ್ರದೇಶದ ಮನೆಯೊಂದು ನೋಡ ನೋಡುತ್ತಿದ್ದಂತೆಯೇ ಧರೆಗುರುಳಿದೆ. ಬೃಹತ್ ಗಾತ್ರದ ಅಲೆಗಳ ಹೊಡೆತಕ್ಕೆ ಮನೆ ನಾಮಾವಶೇಷವಾಗಿದ್ದು, ಮತ್ತಷ್ಟು ಮನೆಗಳು ಸಮುದ್ರದ ಪಾಲಾಗುವ ಆತಂಕ ಹೆಚ್ಚಾಗಿದೆ.

ಇನ್ನು ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮಡಿಕೇರಿ ನಗರದ ಚಾಮುಂಡೇಶ್ವರಿ ನಗರ ಬಡಾವಣೆಯ ಮನೆಯೊಂದರ ಕೆಳಗೆ ಗುಡ್ಡ ಕುಸಿದಿದ್ದು, ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಚಾಮುಂಡೇಶ್ವರಿ ನಗರದ ನಿವಾಸಿಯಾದ ಶ್ಯಾಮ್ ಎಂಬವರ ಮನೆ ಕೆಳಗೆ ಭಾರಿ ಗಾತ್ರದ ಗುಡ್ಡ ಕುಸಿಯುತ್ತಿದೆ. ಕೂಡಲೇ ಸ್ಥಳೀಯರು ಜಿಲ್ಲಾಡಳಿತದ ಸಹಾಯವಾಣಿಗೆ ಕರೆ ಮಾಡಿದ್ದು, ಸ್ಥಳಕ್ಕಾಗಮಿಸಿದ ಇನ್‍ಸ್ಪೆಕ್ಟರ್ ಸ್ಥಳ ಪರಿಶೀಲಿಸಿದ್ರು. ಬಳಿಕ ಗುಡ್ಡ ಕುಸಿಯೋ ಭೀತಿ ಹಿನ್ನೆಲೆಯಲ್ಲಿ ಮೂರು ಕುಟುಂಬಗಳನ್ನು ಎನ್‍ಡಿಆರ್‍ಎಫ್ ತಂಡ ಸ್ಥಳಾಂತರಿಸಿದೆ.

ಉಡುಪಿಯಲ್ಲಿ ಮಳೆ ಅಬ್ಬರ ಜೋರಾಗಿದೆ. ಕಳೆದ 1 ವಾರದಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕಳೆದ 24 ಗಂಟೆಯಲ್ಲಿ 114 ಮಿಲಿ. ಮೀ ಮಳೆ ದಾಖಲಾಗಿದೆ. ವಾರಾಂತ್ಯದವರೆಗೆ ಭಾರೀ ಮಳೆ ಸಾಧ್ಯತೆಯಿದ್ದು, ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನದಿ ಪಾತ್ರ ಹಾಗೂ ಸಮುದ್ರ ತೀರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಹಾವೇರಿ, ಯಾದಗಿರಿ, ಶಿವಮೊಗ್ಗ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜನರಿಗೆ ಕೊರೊನಾ ಭಯದ ನಡುವೆ ಪ್ರವಾಹದ ಭೀತಿ ಎದುರಾಗಿದೆ.

Comments

Leave a Reply

Your email address will not be published. Required fields are marked *