ಕೆಜಿಎಫ್‍ನಲ್ಲಿ 3,200 ಎಕರೆ ಹಸ್ತಾಂತರಕ್ಕೆ ಚಿಂತನೆ

ಬೆಂಗಳೂರು: 6 ತಿಂಗಳೊಳಗೆ ಕೆಜಿಎಫ್‍ನಲ್ಲಿ ಸರ್ವೆ ನಡೆಸಿ ಯಾವುದೇ ಗಣಿ ಸಂಪತ್ತು ಪತ್ತೆಯಾಗದಿದ್ದರೆ 3,200 ಎಕರೆ ಜಮೀನನ್ನು ರಾಜ್ಯ ಸರ್ಕಾರಕ್ಕೆ ನೀಡಲು ಕ್ರಮ ವಹಿಸುವುದಾಗಿ ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದಲ್ಲಿ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಬಾಕಿ ಇರುವ ವಿಷಯಗಳ ಕುರಿತಂತೆ ಇಂದು ಸಿಎಂ ಯಡಿಯೂರಪ್ಪ ಜೊತೆ ಕೇಂದ್ರ ಸಚಿವರ ನಿಯೋಗ ಸಭೆ ಮಾಡಿ ಚರ್ಚೆ ನಡೆಸಿತು. ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಷಿ, ರಾಜ್ಯ ಸರ್ಕಾರ ಕೆಜಿಎಫ್ ನಲ್ಲಿನ 3,200 ಎಕರೆ ಭೂಮಿಯನ್ನು ನೀಡುವಂತೆ ಕೋರಿತ್ತು. ಈ ಸಂಬಂಧ ಮೊದಲನೆಯದಾಗಿ 3 ತಿಂಗಳಲ್ಲಿ ಭೌತಿಕ ಸರ್ವೆ ಮಾಡಲು ಸೂಚನೆ ನೀಡಿದ್ದೇವೆ. ನಮ್ಮ ಇಲಾಖೆ ಎಂಇಸಿಎಲ್ ಕಡೆಯಿಂದ 6 ತಿಂಗಳಲ್ಲಿ ಅಲ್ಲಿರುವ 12,000 ಎಕರೆ ಜಮೀನಿನಲ್ಲಿ ಯಾವುದನ್ನು ಎಕ್ಸ್ ಪ್ಲೋರ್ ಮಾಡಿಲ್ಲ, ಅದನ್ನು ಗುರುತಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಅಂದರು.

ಒಂದು ವೇಳೆ ರಾಜ್ಯ ಸರ್ಕಾರ ಕೇಳಿರುವ 3,200 ಎಕರೆ ಜಮೀನಿನಲ್ಲಿ ಯಾವುದೇ ಗಣಿ ಸಂಪತ್ತು ಇಲ್ಲವಾದರೆ ಅದನ್ನು ರಾಜ್ಯ ಸರ್ಕಾರಕ್ಕೆ ವರ್ಗಾಯಿಸಲು ತೀರ್ಮಾನ ಮಾಡುತ್ತೇವೆ. ಕಲ್ಲಿದ್ದಲು ಸರಬರಾಜು ಬಗ್ಗೆ ವಿಸ್ತೃತ ವಾಗಿ ಚರ್ಚೆ ನಡೆದಿದೆ. ದೋಣಿ ಮಲೈಯಲ್ಲಿ ಸರ್ಕಾರ ಹೆಚ್ಚಿನ ಪ್ರೀಮಿಯಂ ಬರಬೇಕು ಎಂದು ಬೇಡಿಕೆ ಇಟ್ಟಿತ್ತು. ಆದರೆ ಕೇಂದ್ರದ ಕಾನೂನಿನಲ್ಲಿ ತೊಡಕು ಇದೆ. ಈ ಸಂಬಂಧ ಸಮಿತಿ ರಚಿಸಿ, 3 ತಿಂಗಳೊಳಗೆ ಗಣಿ ಗುತ್ತಿಗೆ ಪಡೆದ ಪಿಎಸ್‍ಯುಗಳು ಎಷ್ಟು ಪ್ರೀಮಿಯಂ ಕೊಡಬೇಕು ಎಂದು ತೀರ್ಮಾನ ಮಾಡಲಿದೆ ಎಂದು ತಿಳಿಸಿದರು.

ಅಲ್ಲಿವರೆಗೆ ಕರ್ನಾಟಕಕ್ಕೆ ಶೇ37.25 ರಾಯಲ್ಟಿ ನೀಡಲು ಸೂಚನೆ ನೀಡಿದ್ದೇನೆ ಅಂತಲೂ ಜೋಷಿ ಹೇಳಿದ್ರು. ರಾಜ್ಯದ ಸುಪರ್ದಿಗೆ ನೀಡಲಾಗಿರುವ ಬಾರಂಜಾ ಕೋಲ್ ಮೈನ್‍ನಲ್ಲಿ ಕಲ್ಲಿದ್ದಲು ಕಳವು ಆಗಿದ್ದು, ತನಿಖೆ ನಡೀತಿದೆ. ಅಲ್ಲಿ ಗಣಿಗಾರಿಕೆ ಪ್ರಾರಂಭಿಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.

Comments

Leave a Reply

Your email address will not be published. Required fields are marked *