ರಾಜ್ಯಕ್ಕೂ ಪೆಗಾಸಸ್ ನಂಟು – ಸಮ್ಮಿಶ್ರ ಸರ್ಕಾರ ಕೆಡವಲು ಗೂಢಾಚಾರಿಕೆ

– ದೆಹಲಿಯಲ್ಲಿ ಕಾಂಗ್ರೆಸ್ ನಾಯಕರಿಂದ ಸುದ್ದಿಗೋಷ್ಠಿ
– ಇದು ಕಾಂಗ್ರೆಸ್ ಷಡ್ಯಂತ್ರ ಎಂದ ಬಿಜೆಪಿ

ನವದೆಹಲಿ/ ಬೆಂಗಳೂರು:  ಪೆಗಾಸಸ್ ಭೂತಕ್ಕೆ ರಾಜ್ಯದ ನಂಟು ಇದ್ಯಂತೆ. 2019ರ ಜುಲೈನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪ್ರಮುಖರ ಮೇಲೆ ಕೇಂದ್ರ ಸರ್ಕಾರ ಪೆಗಾಸಸ್ ಅಸ್ತ್ರ ಪ್ರಯೋಗಿಸಿ ನಿಗಾ ಇರಿಸಿತ್ತು ಎಂದು ವರದಿಯಾಗಿದೆ.

ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡ, ಆಗಿನ ಸಿಎಂ ಕುಮಾರಸ್ವಾಮಿ ಡಿಸಿಎಂ ಪರಮೇಶ್ವರ್, ಸಿದ್ದರಾಮಯ್ಯನವರ ಆಪ್ತ ಕಾರ್ಯದರ್ಶಿಯ ಫೋನ್ ನಂಬರ್ ಗಳನ್ನು ಹ್ಯಾಕ್ ಮಾಡಿ ಎಲ್ಲರ ಕರೆಗಳನ್ನು ಕದ್ದಾಲಿಸುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ವಿಚಾರ ಬಯಲಾದ ಬೆನ್ನಲ್ಲೇ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಉಸ್ತುವಾರಿ ರಣದೀಪ್ ಸುರ್ಜೆವಾಲಾ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗೂಢಚರ್ಯೆ ಮಾಡಿಯೇ ಸಮ್ಮಿಶ್ರ ಸರ್ಕಾರ ಕೆಡವಲಾಗಿದೆ. ಮೋದಿ, ಚುನಾಯಿತ ಸರ್ಕಾರ ಹತ್ಯೆ ಮಾಡಿದ್ದಾರೆ. ಇದೇ ಅಸ್ತ್ರವನ್ನು ಎಲ್ಲಾ ಕಡೆಯೂ ಬಳಸಿರುವ ಸಂಭವ ಇದೆ ಎಂದು  ಆಪಾದಿಸಿದರು. ಇದನ್ನೂ ಓದಿ: ಕೆಆರ್‌ಎಸ್‌ ಸುತ್ತಲಿನ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಿ- ಕೇಂದ್ರ ಸಚಿವರಿಗೆ ಸುಮಲತಾ ಮನವಿ

ಫ್ರಾನ್ಸ್ ಮಾದರಿಯಲ್ಲೇ ಇಲ್ಲೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ಅವರು ಗುರುವಾರ ಎಲ್ಲಾ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ. ರಾಜ್ಯಪಾಲರಿಗೆ ದೂರು ಕೊಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದರು.

ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿ, ನಮ್ಮ ಫೋನ್ ಕದ್ದಾಲಿಸಿ, ನಮ್ಮ ವಿರುದ್ಧವೇ ಬಿಜೆಪಿ ಕದ್ದಾಲಿಕೆ ಆರೋಪ ಮಾಡಿತು. ಅಧಿಕಾರಕ್ಕಾಗಿ ಬಿಜೆಪಿ ಕೀಳು ಮಟ್ಟಕ್ಕಿಳಿಯುತ್ತಿದೆ. ಇದು ಅಪಾಯಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಇದೆಲ್ಲಾ ಸುಳ್ಳು. ಇದು ಕಾಂಗ್ರೆಸ್ ಷಡ್ಯಂತ್ರ. ಬಿಜೆಪಿ ಯಾವುದೇ ಫೋನ್ ಕದ್ದಾಲಿಕೆ ಮಾಡಿಲ್ಲ ಎಂದು ಡಿಸಿಎಂ ಅಶ್ವಥ್‍ನಾರಾಯಣ್ ಆರೋಪಗಳಿಗೆ ತಿರುಗೇಟು ನೀಡಿದರು.

Comments

Leave a Reply

Your email address will not be published. Required fields are marked *