ರಾಜಸ್ಥಾನದ ‘ಕೈ’ ಶಾಸಕರಿಗೆ ಬಿಜೆಪಿಯ 25 ಕೋಟಿಯ ಬಲೆ!

ಜೈಪುರ: ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಹುನ್ನಾರ ನಡೆಸಲಾಗುತ್ತಿರುವ ಸಂಬಂಧ ಎಸ್‍ಓಜಿ (ಸ್ಪೆಷಲ್ ಆಪರೇಷನ್ ಗ್ರೂಪ್) ಪ್ರಕರಣ ದಾಖಲಿಸಿಕೊಂಡಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಯಾರಿಗೆ ಸಿಎಂ ಪಟ್ಟಕ್ಕೇರಲು ಇಷ್ಟವಿರಲ್ಲ ಹೇಳಿ. ಆದ್ರೆ ಇದು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಸಚಿನ್ ಪೈಲಟ್‍ಗೆ ತಿರುಗೇಟು ನೀಡಿದ್ದಾರೆ.

ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆಲ್ಲಲಿದೆ. ರಾಜಸ್ಥಾನದ ಜನತೆ ಶಾಸಕರ ಖರೀದಿಗೆ ಮುಂದಾಗಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ನಾವು ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಿಗಿದ್ದರೆ ಬಿಜೆಪಿ ಸಾವಿರಾರು ಕೋಟಿ ಖರ್ಚು ಮಾಡಿ ಶಾಸಕರನ್ನು ಖರೀದಿಸುವ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಮುಂದಾಗಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.

ಇಬ್ಬರು ಶಾಸಕರಿಗೆ ಬಿಜೆಪಿ 25 ಕೋಟಿಯ ಆಫರ್ ನೀಡಿದೆ ಎಂದು ವರದಿಯಾಗಿದೆ. ಕಾಂಗ್ರೆಸ್ ಶಾಸಕರ ಖರೀದಿಯಲ್ಲಿ ಡಿಸಿಎಂ ಸಚಿವ ಪೈಲಟ್ ಹಸ್ತಕ್ಷೇಪವಿದೆ ಎಂಬ ಮಾತುಗಳು ರಾಜಸ್ಥಾನದ ರಾಜಕೀಯ ಅಂಗಳದಲ್ಲಿ ಕೇಳಿ ಬರುತ್ತಿವೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಎಸ್‍ಓಜಿ, ಸಿಎಂ ಅಶೋಕ್ ಗೆಹ್ಲೋಟ್, ಡಿಸಿಎಂ ಸಚಿನ್ ಪೈಲಟ್ ಮತ್ತು ಸರ್ಕಾರದ ಮುಖ್ಯ ಸಚೇತಕ ಮಹೇಶ್ ಜೋಶಿ ಅವರಿಗೆ ಹೇಳಿಕೆ ದಾಖಲಿಸಲು ಕರೆದಿದೆ.

ಫೋನ್ ಮೂಲಕ ಕುದುರೆ ವ್ಯಾಪಾರ ನಡೆಸಿ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪದಡಿ ಎಸ್‍ಓಜಿ ಪ್ರಕರಣ ದಾಖಲಿಸಿಕೊಂಡಿದೆ. ರಾಜಸ್ಥಾನದ ವಿಧಾನಸಭೆ 200 ಶಾಸಕರ ಪೈಕಿ ಕಾಂಗ್ರೆಸ್ ಬಳಿ 107 ಬಲವಿದೆ. 13 ಪಕ್ಷೇತರ ಪೈಕಿ 12 ಶಾಸಕರು ಕಾಂಗ್ರೆಸ್ ಗೆ ಬೆಂಬಲ ನೀಡಿದ್ದಾರೆ. ಬಿಜೆಪಿ 72 ಶಾಸಕರನ್ನು ಹೊಂದಿದೆ.

Comments

Leave a Reply

Your email address will not be published. Required fields are marked *