ರಾಜಕುಮಾರ ಸಾರಥಿಯ ಮನೆಗೆ ಕುಲಪುತ್ರನ ಆಗಮನ

ಬೆಂಗಳೂರು: ‘ರಾಜಕುಮಾರ’ ಸಿನಿಮಾ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಂದೆಯಾದ ಸಂತಸದಲ್ಲಿದ್ದು, ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಸಂತೋಷ್ ಆನಂದ್ ರಾಮ್ ಪತ್ನಿ ಸುರಭಿ ಹತ್ವಾರ್ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ನಿರ್ದೇಶಕರ ಮನೆಗೆ ಹೊಸ ಅತಿಥಿಯ ಆಗಮನವಾಗಿದ್ದು, ಕುಟುಂಬದವರು ಸಂಭ್ರಮ ಪಡುತ್ತಿದ್ದಾರೆ. ಈ ಬಗ್ಗೆ ಸಂತೋಷ್ ಸೋಶಿಯಲ್ ಮೀಡಿಯಾದಲ್ಲಿ ತಾವು ತಂದೆಯಾಗಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.

“ನಾನು ಗಂಡು ಮಗುವಿನ ತಂದೆಯಾಗಿದ್ದಾನೆ. ನಿಮ್ಮೆಲ್ಲರ ಶುಭಾಶಯಗಳಿಗಾಗಿ ನಮ್ಮ ಕುಟುಂಬದ ಪರವಾಗಿ ಧನ್ಯವಾದಗಳು. ಈ ಮೂಲಕ ನಮ್ಮ ಕುಟುಂಬ ದೊಡ್ಡದಾಗಿದೆ. ಅಮ್ಮ-ಮಗ ಕ್ಷೇಮವಾಗಿದ್ದಾರೆ. ನಿಮ್ಮ ಆಶೀರ್ವಾದ ನಮ್ಮ ಶ್ರೀರಕ್ಷೆ” ಎಂದು ಬರೆದುಕೊಳ್ಳುವ ಮೂಲಕ ತಂದೆಯಾಗಿರುವ ಖುಷಿಯನ್ನು ಶೇರ್ ಮಾಡಿಕೊಂಡಿದ್ದಾರೆ. ನಿರ್ದೇಶಕರು ಟ್ವೀಟ್ ಮಾಡಿದ ತಕ್ಷಣ ಅನೇಕರು ವಿಶ್ ಮಾಡುತ್ತಿದ್ದಾರೆ.

ಸಂತೋಷ್ ಆನಂದ್ ರಾಮ್ ಫೆಬ್ರವರಿ 2018ರಲ್ಲಿ ಬಳ್ಳಾರಿ ಮೂಲದ ಸುರಭಿ ಹತ್ವಾರ್ ಜೊತೆ ಸಪ್ತಪದಿ ತುಳಿದಿದ್ದರು. ಬೆಂಗಳೂರಿನ ಜೆ.ಪಿ ನಗರದ ಸಿಂಧೂರಿ ಕನ್ವೆಂಷನ್ ಸೆಂಟರಿನಲ್ಲಿ ಆರತಕ್ಷತೆ ನಡೆದಿತ್ತು. ಅದ್ಧೂರಿಯಾಗಿ ನಡೆದ ಆರತಕ್ಷತೆ ಸಮಾರಂಭಕ್ಕೆ ಕನ್ನಡ ಚಿತ್ರೋದ್ಯಮದ ಅನೇಕ ಗಣ್ಯರು ಬಂದು ಶುಭಾಶಯ ತಿಳಿಸಿದ್ದರು.

ಸ್ಯಾಂಡಲ್‍ವುಡ್‍ನಲ್ಲಿ ‘ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿ’ ಸಿನಿಮಾದ ಮೂಲಕ ನಿರ್ದೇಶನಕ್ಕೆ ಎಂಟ್ರಿ ಕೊಟ್ಟ ಸಂತೋಷ್ ಆನಂದ್ ರಾಮ್ ಅವರ ಮೊದಲ ಚಿತ್ರವೇ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಎರಡನೇ ಚಿತ್ರ ‘ರಾಜಕುಮಾರ’ ಕೂಡ ಅದ್ಧೂರಿ ಹಿಟ್ ಚಿತ್ರ. ಇದೀಗ ಸಂತೋಷ್ ಆನಂದ್ ರಾಮ್, ಪುನೀತ್ ರಾಜ್‍ಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *