ರಾಜಕಾಲುವೆ ಮೇಲೆ ಕಲ್ಯಾಣ ಮಂಟಪವಿದ್ದರೆ ರಾಜಕೀಯ ನಿವೃತ್ತಿ: ಸಾರಾ ಮಹೇಶ್

ಮೈಸೂರು: ನಾನು ರಾಜಕಾಲುವೆ ಮೇಲೆ ಕಲ್ಯಾಣ ಮಂಟಪ ನಿರ್ಮಿಸಿದ್ರೆ ಆ ಚೌಲ್ಟ್ರಿಯನ್ನು ಸಾರ್ವಜನಿಕ ಬಳಕೆಗೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಶಾಸಕ ಸಾರಾ ಮಹೇಶ್ ಹೇಳಿದ್ದಾರೆ.

ಸಾರಾ ಮಹೇಶ್ ವರ್ಸಸ್ ರೋಹಿಣಿ ಸಿಂಧೂರಿ ನಡುವಿನ ಭೂ ಅವ್ಯವಹರ ಆರೋಪಗಳ ಸಮರ ಮುಂದುವರಿದಿದೆ. ಸಾರಾ ಮಹೇಶ್ ಒಡೆತನದ ಸಾರಾ ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ ಎಂದು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಆರೋಪಿಸಿದ್ದರು. ಹೀಗಾಗಿ ಇಂದು ಸಾರಾ ಮಹೇಶ್ ಏಕಾಂಗಿಯಾಗಿ ಮೈಸೂರಿನ ಪ್ರಾದೇಶಿಕ ಕಚೇರಿ ಮುಂಭಾಗ ಪ್ರತಿಭಟನೆ ಆರಂಭಿಸಿದ್ದರು. ಇದನ್ನೂ ಓದಿ: ರೋಹಿಣಿ ಸಿಂಧೂರಿಯನ್ನು ಮೈಸೂರಿನ ಭೂ ಅಕ್ರಮದ ವಿಶೇಷ ತನಿಖಾಧಿಕಾರಿಯಾಗಿ ನೇಮಿಸಿ: ವಿಶ್ವನಾಥ್ ಆಗ್ರಹ

ನನ್ನ ಒಡೆತನದಲ್ಲಿರುವ ಸಾ.ರಾ. ಚೌಲ್ಟ್ರಿ ರಾಜಕಾಲುವೆ ಮೇಲೆ ನಿರ್ಮಾಣ ಆಗಿಲ್ಲ. ಆದ್ದರಿಂದಲೇ ಏಕಾಂಗಿ ಪ್ರತಿಭಟನೆ ಶುರು ಮಾಡಿದ್ದೇನೆ. ಉನ್ನತ ಮಟ್ಟದ ಅಧಿಕಾರಿಗಳು ಜಾಗದ ಸರ್ವೇ ಮಾಡಲಿ. ರಾಜಕಾಲುವೆ ಮೇಲೆ ನಿರ್ಮಾಣ ಆಗಿದ್ದರೆ ಅದನ್ನು ಸಾರ್ವಜನಿಕರ ಬಳಕೆಗಾಗಿ ರಾಜ್ಯಪಾಲರಿಗೆ ಹಸ್ತಾಂತರ ಮಾಡುತ್ತೇನೆ. ಮಾತ್ರವಲ್ಲ ನಾನು ಸಾರ್ವಜನಿಕ ಜೀವನದಿಂದಲೇ ನಿವೃತ್ತಿ ಹೊಂದುತ್ತೇನೆ ಎಂದರು. ಇದನ್ನೂ ಓದಿ: 12 ಕೋಟಿ ಸಿಎಸ್‍ಆರ್ ಫಂಡ್ ಖರ್ಚಿನ ಮಾಹಿತಿ ಕೇಳಿದ್ದೆ ಅಷ್ಟೇ – ರೋಹಿಣಿ ಸಿಂಧೂರಿ

ಒಂದು ವೇಳೆ ಅವರು ಮಾಡಿರುವ ಆರೋಪ ಸುಳ್ಳಾದರೆ ಐಎಎಸ್ ಹುದ್ದೆಯಿಂದ ಅಮಾನತು ಮಾಡಬೇಕು. ಮಕ್ಕಳನ್ನು ಆಡಿಸಿಕೊಂಡು, ಅಡುಗೆ ಮಾಡಿಕೊಂಡು ಇರಲು ಆಂಧ್ರಕ್ಕೆ ಕಳುಹಿಸಬೇಕು ಎಂದು ಕಿಡಿಕಾರಿದರು. ಈ ಬಗ್ಗೆ ಸೋಮವಾರ ತನಿಖೆ ನಡೆಸಿ ವರದಿ ನೀಡುವುದಾಗಿ ಪ್ರಾದೇಶಿಕ ಆಯುಕ್ತ ಪ್ರಕಾಶ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಶಾಸಕ ಸಾರಾ ಮಹೇಶ್ ಪ್ರತಿಭಟನೆ ಮುಂದೂಡಿದರು. ಇದನ್ನೂ ಓದಿ: ವರ್ಗಾವಣೆಗೂ ಎರಡು ದಿನ ಮುಂಚೆ ಒತ್ತುವರಿ ತೆರವು, ಭೂ ಅಕ್ರಮದ ತನಿಖೆಗೆ ಆದೇಶಿಸಿದ್ದ ರೋಹಿಣಿ ಸಿಂಧೂರಿ

ಇತ್ತ ಇಂದು ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ರಾಜಕಾಲುವೆ ಮೇಲೆ ಸಾರಾ ಕಲ್ಯಾಣ ಮಂಟಪ ನಿರ್ಮಾಣ ಆಗಿದೆ. ಒಂದು ಗುಂಟೆ ಅಲ್ಲ ಸಾವಿರಾರು ಎಕರೆ ಈ ರೀತಿ ಒತ್ತುವರಿ ಆಗಿದೆ. ಎಲ್ಲಾ ಜನಪ್ರತಿನಿಧಿಗಳು ಒಟ್ಟಾಗಿ ಸೇರಿ ಕೊರೊನಾ ಓಡಿಸುವ ಬದಲು ಅಧಿಕಾರಿ ಓಡಿಸಿದರು. ರೋಹಿಣಿ ಸಿಂಧೂರಿ, ಶಿಲ್ಪಾನಾಗ್ ಇಬ್ಬರೂ ಒಳ್ಳೆಯ ಅಧಿಕಾರಿಗಳು. ಇಬ್ಬರು ಐಎಎಸ್ ಅಧಿಕಾರಿಗಳನ್ನು ಹೊರ ಹಾಕಿದ್ದು ರಾಜಕಾರಣಿಗಳ ಸ್ವಾರ್ಥ ಎಂದಿದ್ದರು. ಇದನ್ನೂ ಓದಿ: ಡಿಸಿ ಮನೆ ಕರೆಂಟ್ ಬಿಲ್ ತಿಂಗಳಿಗೆ 50 ಸಾವಿರ ರೂ.: ಸಾರಾ ಮಹೇಶ್ ಆರೋಪ

Comments

Leave a Reply

Your email address will not be published. Required fields are marked *