ರಾಜಕಾರಣಿಗಳು ಮಠ ಪ್ರವೇಶಿಸಿದರೆ ಅಶಾಂತಿ: ದಿಂಗಾಲೇಶ್ವರ ಶ್ರೀ

ಧಾರವಾಡ: ಮಠಗಳಲ್ಲಿ ಭಕ್ತರು ಹೊರ ಹೋಗಿ, ರಾಜಕಾರಣಿಗಳು ಒಳ ಹೋದರೆ ಅಲ್ಲಿ ಅಶಾಂತಿ ಗ್ಯಾರಂಟಿ ಎಂದು ಬಾಲೇಹೊಸೂರು ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಮೂರು ಸಾವಿರ ಮಠದ ಆಸ್ತಿಯನ್ನು ಕೆಲವರಿಗೆ ದಾನವಾಗಿ, ಇನ್ನೂ ಕೆಲವರಿಗೆ ಕರೆದು ಕೊಡಲಾಗಿದೆ. ಅಲ್ಲದೆ ಹಲವರಿಗೆ ಕೆಲವು ಅಗ್ರಿಮೆಂಟ್ ಮೇಲೆ ಜಮೀನು ಕೊಡಲಾಗಿದೆ. ಈ ಎಲ್ಲ ಆಸ್ತಿ ಮಠಕ್ಕೆ ಉಳಿಯಬೇಕು, ಅದಕ್ಕೆ ನಾವು ಎಲ್ಲ ಕಡೆ ಜನಜಾಗೃತಿ ಮಾಡುತಿದ್ದೇವೆ ಎಂದು ತಿಳಿಸಿದರು.

ನಮ್ಮ ಹೋರಾಟ ತೀವ್ರಗೊಳ್ಳುವ ಮೊದಲು ಯಾರು ಮಠದ ಭೂಮಿ ತೆಗೆದುಕೊಂಡಿದ್ದಾರೆ ಅವರೇ ಸ್ವ ಇಚ್ಛೆಯಿಂದ ವಾಪಸ್ ಮಾಡುತ್ತೇವೆ ಎಂದು ಘೋಷಣೆ ಮಾಡಬೇಕು. ಮಠದ ಆಸ್ತಿ ವಾಪಸ್ ಬರುವವರೆಗೆ ನಾವು ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.

ಯಾವಾಗ ಮಠಗಳಲ್ಲಿ ಭಕ್ತರು ಹೊರ ಹೋಗಿ, ರಾಜಕಾರಣಿಗಳು ಒಳ ಹೋಗುತ್ತಾರೋ ಅಲ್ಲಿ ಅಶಾಂತಿ ಗ್ಯಾರಂಟಿ ಎಂದು ರಾಜಕಾರಣಿಗಳ ಮೇಲೆ ಹರಿಹಾಯ್ದರು. ರಾಜಕಾರಣಿಗಳು ಇರುವ ಜಾಗ ವಿಧಾನಸೌಧವೇ ಹೊರತು ಮಠ ಅಲ್ಲ. ಮಠದಲ್ಲಿ ಸ್ವಾಮಿಗಳು ಇರಬೇಕು, ವಿಧಾನಸೌಧದಲ್ಲಿ ರಾಜಕಾರಣಿಗಳು ಇರಬೇಕು. ಬಹಳಷ್ಟು ಮಠಗಳಲ್ಲಿ ರಾಜಕಾರಣಿಗಳ ಪ್ರವೇಶ ಆಗಿ, ಇಡೀ ಮಠದ ಆಸ್ತಿ ಕಬಳಿಸುವ ಹಾಗೂ ಮಠದ ಆಸ್ತಿ ನಾಶ ಮಾಡುವ ಪ್ರಯತ್ನ ನಡೆದಿದೆ. ಇದು ಒಳ್ಳೆಯದಲ್ಲ ಎಂದು ಶ್ರೀಗಳು ಹೇಳಿದರು.

Comments

Leave a Reply

Your email address will not be published. Required fields are marked *