ರಸಗೊಬ್ಬರ ಹಗರಣ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಹೋದರನ ಆಸ್ತಿಗಳ ಮೇಲೆ ಇಡಿ ದಾಳಿ

ಜೈಪುರ: ರಸಗೊಬ್ಬರ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಹೋದರ ನಿವಾಸ ಹಾಗೂ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಚಿನ್ ಪೈಲಟ್ ಬಂಡಾಯದ ನಡುವೆ ಸಿಎಂ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವ ಸಂದರ್ಭದಲ್ಲೇ ಇಡಿ ಅಧಿಕಾರಿಗಳು ಅಗ್ರಸೈನ್ ಗೆಹ್ಲೋಟ್ ಆಸ್ತಿಗಳ ಮೇಲೆ ದಾಳಿ ನಡೆಸಿರುವುದು ಚರ್ಚೆಗೆ ಕಾರಣವಾಗಿದೆ.

ಹಗರಣಕ್ಕೆ ಸಂಬಂಧಿಸಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಇಡಿ ದಾಳಿ ನಡೆಸಿದೆ. ರಾಜಸ್ಥಾನ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ದೆಹಲಿ ಸೇರಿದಂತೆ ದೇಶದ 13 ಕಡೆ ಇಡಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಇಡಿ ಅಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ, ಸಬ್ಸಿಡಿ ದರದಲ್ಲಿ ಇಂಡಿಯನ್ ಪೊಟಾಷ್ ಲಿಮಿಟೆಡ್ ಅಧಿಕೃತವಾಗಿ ರಸಗೊಬ್ಬರಗಳನ್ನು ಪೂರೈಸುತ್ತದೆ. ಈ ಗೊಬ್ಬರವನ್ನು ರೈತರು ಸಬ್ಸಿಡಿ ದರದಲ್ಲಿ ಖರೀದಿ ಮಾಡುತ್ತಾರೆ. ಆದರೆ ಅಗ್ರಸೈನ್ ಗೆಹ್ಲೋಟ್ ಸೇರಿದ ಅನುಪಮ್ ಕೃಷಿ ಸಂಸ್ಥೆ 2007 ರಿಂದ 2009ರ ನಡುವೆ ಸಬ್ಸಿಡಿ ದರದಲ್ಲಿ ರಸಗೊಬ್ಬರ ಖರೀದಿ ಮಾಡಿ ಅದನ್ನು ರೈತರಿಗೆ ಮಾರಾಟ ಮಾಡದೆ ಬೇರೆ ಕಂಪನೆಗಳಿಗೆ ಮಾರಾಟ ಮಾಡಿದೆ. ಆ ಸಂಸ್ಥೆಗಳು ಗೊಬ್ಬರವನ್ನು ಮಲೇಷಿಯಾ, ಸಿಂಗಪೂರಕ್ಕೆ ಅಕ್ರಮವಾಗಿ ರಪ್ತು ಮಾಡಿವೆ.

2013-13 ರಲ್ಲಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ಅಧಿಕಾರಿಗಳು ಈ ಹಗರಣವನ್ನು ಬೆಳಕಿಗೆ ತಂದಿದ್ದರು. ಆ ವೇಳೆ ಹಗರಣದ ಕುರಿತು ಪ್ರತಿಕ್ರಿಯೆ ನೀಡಿದ್ದ ಅಗ್ರಸೈನ್ ಗೆಹ್ಲೋಟ್, ತಮ್ಮಿಂದ ಕೆಲ ಮಧ್ಯವರ್ತಿಗಳು ರೈತರಿಗೆ ರಸಗೊಬ್ಬರ ನೀಡುವುದಾಗಿ ಖರೀದಿ ಮಾಡಿ ಅದನ್ನು ರಪ್ತು ಮಾಡಿದ್ದಾರೆ ಎಂದು ಹೇಳಿದ್ದರು. ಸಬ್ಸಿಡಿಯುಕ್ತ ಪೊಟ್ಯಾಷ್ ರಫ್ತು ಮಾಡುವುದರ ಮೇಲೆ ನಿಷೇಧ ವಿದ್ದರು ಅಗ್ರಸೈನ್ ಸಂಸ್ಥೆ ರಫ್ತು ಮಾಡಿದೆ ಎಂದು ಬಿಜೆಪಿ 2017ರಲ್ಲಿ ಆರೋಪ ಮಾಡಿತ್ತು.

Comments

Leave a Reply

Your email address will not be published. Required fields are marked *