ರಮೇಶ್ ಜಾರಕಿಹೊಳಿಗೆ ಬಿಜೆಪಿಯ ಗರ್ಭಗುಡಿ ಸಂಸ್ಕೃತಿ ಒಗ್ಗುತ್ತಿಲ್ಲ: ಅಮರೇಗೌಡ

ಕೊಪ್ಪಳ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಬಿಟ್ಟು ಬೇರೆ ಪಕ್ಷ ಸೇರಬಹುದು. ಅವರಿಗೆ ಬಿಜೆಪಿಯ ಗರ್ಭಗುಡಿ ಸಂಸ್ಕೃತಿ ಒಗ್ಗುತ್ತಿಲ್ಲ ಎನ್ನುವುದು ಅವರ ನಡುವಳಿಕೆಯಿಂದ ತಿಳಿಯುತ್ತಿದೆ ಎಂದು ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಮರೇಗೌಡರು, ಜಾರಕಿಹೊಳಿ ಇತ್ತೀಚೆಗೆ ಕೆಲವರೊಂದಿಗೆ ಮುಂಬೈಗೆ ಹೋಗಿರುವುದನ್ನು ನೋಡಿದರೆ ಅವರು ಬಿಜೆಪಿ ತೊರೆಯುವ ಸಾಧ್ಯತೆ ಇದೆ. ಅವರೊಂದಿಗೆ ಕೆಲವರು ಕಾಂಗ್ರೆಸ್ ಅಥವಾ ಜೆಡಿಎಸ್‍ಗೆ ಮತ್ತೆ ಸೇರುವ ಸಾಧ್ಯತೆ ಇದೆ. ಒಂದು ವೇಳೆ ಅವರು ವಾಪಸ್ ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಸರ್ಕಾರ ಬೀಳಿಸಿ, ರಚಿಸುವ ಶಕ್ತಿ ದೇವರು ಕೊಟ್ಟಿದ್ದಾನೆ: ರಮೇಶ್ ಜಾರಕಿಹೊಳಿ

ಯಾವುದೇ ಪಕ್ಷದ ಶಾಸಕರಾಗಲಿ ಅವಧಿಯ ಮುನ್ನ ಪಕ್ಷಾಂತರ ಮಾಡಬಾರದು. ಚುನಾವಣಾ ಸಂದರ್ಭದಲ್ಲಿ ಪಕ್ಷಾಂತರ ಮಾಡಿದರೆ ನಡೆಯುತ್ತೆ. ಜಾರಕಿಹೊಳಿಯವರು ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ತೆಗೆಯಲು ಹೊರಟಿಲ್ಲ ಅನಿಸುತ್ತದೆ. ಯಾಕೆಂದರೆ ಯಡಿಯೂರಪ್ಪ ಅಧಿಕಾರಕ್ಕೆ ಬರಲು ರಮೇಶ್ ಜಾರಕಿಹೊಳಿ ಕಾರಣ. ಬಿಜೆಪಿ ಯಡಿಯೂರಪ್ಪ ಅವರನ್ನು ಬದಲಾಯಿಸುವುದು ಕಷ್ಟ ಬಿಜೆಪಿಯಲ್ಲಿ ಯಡಿಯೂರಪ್ಪ ಇಲ್ಲಂದ್ರೆ ಬಿಜೆಪಿ ಇಲ್ಲ ಎಂದು ಮತ್ತೊಮ್ಮೆ ಹೇಳಿದರು.

ಸಮಯ ಸಂದರ್ಭ ಬಂದಾಗ ಶಾಸಕರು ಪಕ್ಷ ಬದಲಾಯಿಸುವುದು ಸಹಜ, ಆದರೆ ಇತ್ತೀಚಿನ ದಿನಗಳಲ್ಲಿ ಅವರು ಅತಿರೇಕಕ್ಕೆ ಹೋಗಿದೆ. ಕಾಂಗ್ರೆಸ್ ಸಿಎಂ ಸ್ಥಾನದ ಬಗ್ಗೆ ಈಗ ಚರ್ಚಿಸಿದರೆ ಬಿಜೆಪಿಗೆ ಅನುಕೂಲವಾಗಲಿದೆ. ನಾವೇ ಅವರಿಗೆ ಆಹಾರವಾಗುವುದು ಬೇಡ, ಕಾಂಗ್ರೆಸ್ 7-8 ಜನ ಸಿಎಂ ಸ್ಥಾನದ ಅರ್ಹತೆ ಹೊಂದಿದವರು ಇದ್ದಾರೆ. ಚುನಾವಣೆಯ ನಂತರ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ. ಕೆಲವರು ಕೆಲವರ ಹೆಸರು ಹೇಳುತ್ತಿದ್ದರೂ ತಪ್ಪೇನಿಲ್ಲ ಎಂದು ಸಮಾಜಾಯಿಷಿ ನೀಡಿದರು.

Comments

Leave a Reply

Your email address will not be published. Required fields are marked *