ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ಸಾಧ್ಯತೆ

ಬೆಂಗಳೂರು: ಅತ್ಯಾಚಾರ ಕೇಸಿನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಇಂದು ಕ್ಲೀನ್ ಚಿಟ್ ಸಿಗುವ ಸಾಧ್ಯತೆಗಳಿವೆ.

ಹೌದು. ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿಗೆ ಇಂದು ಬಿಗ್ ಡೇ ಆಗಿದೆ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತನಿಖಾ ಪ್ರಗತಿ ವರದಿ ಕೇಳಿದೆ. ಹೀಗಾಗಿ ಎಸ್‍ಐಟಿ ಇಂದು ತನಿಖಾ ಪ್ರಗತಿ ವರದಿ ಸಲ್ಲಿಸಲಿದೆ. ಈ ವರದಿ ನೋಡಿ ಹೈಕೋರ್ಟ್ ಎಸ್ ಐಟಿಯೇ ತನಿಖಾ ಮುಂದುವರಿಸಬೇಕಾ..? ಅಥವಾ ಬೇರೆ ತನಿಖಾ ಸಂಸ್ಥೆಗೆ ವರ್ಗಾವಣೆ ಆಗ್ಬೇಕಾ..? ಎಂಬುದನ್ನು ನಿರ್ಧಾರ ಮಾಡಲಿದೆ.

ಒಟ್ಟಿನಲ್ಲಿ ಪ್ರಕರಣ ಸಂಬಂಧ ನರೇಶ್ ಮತ್ತು ಶ್ರವಣ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಈ ವೇಳೆ ಎಸ್‍ಐಟಿ ಅಧಿಕಾರಿಗಳು ಆಕ್ಷೇಪಣೆ ಸಲ್ಲಿಕೆ ಮಾಡಲಿದ್ದಾರೆ. ಆಕ್ಷೇಪಣೆ ಸಲ್ಲಿಕೆಯ ಬಳಿಕ ವಾದ ಪ್ರತಿವಾದ ನಡೆಯಲಿದೆ.

ಮಾರ್ಚ್ 2ರಂದು ರಮೇಶ್ ಜಾರಕಿಹೊಳಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ಬಳಿಕ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಕೇಸ್‍ಗೆ ಟ್ವಿಸ್ಟ್ – ಸಮ್ಮತಿಯಿಂದಲೇ ನಡೆದಿತ್ತಾ ಇಬ್ಬರ ನಡುವೆ ಸೆಕ್ಸ್?

ಇತ್ತ ವೀಡಿಯೋ ಸಂಚಲನ ಸೃಷ್ಟಿಸಿ ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಹ ನೀಡಿದ್ದರು. ಆ ಬಳಿಕದಿಂದ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ನಂತರ ಸ್ವತಃ ಸುದ್ದಿಗೋಷ್ಠಿ ಕರೆದು ಮಾಧ್ಯಮಗಳ ಮುಂದೆ ಭಾವುಕರಾಗಿದ್ದರು. ಇಷ್ಟೆಲ್ಲಾ ಆದ ನಂತರ ಮಾಜಿ ಸಚಿವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟು ಗೋಕಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಳಿಕ ಪಿಪಿಇ ಕಿಟ್ ಧರಿಸಿ ಉಪಚುನಾವಣೆಗೆ ಮತದಾನ ಮಾಡಿದ್ದರು.

ಕಳೆದ 6 ದಿನಗಳ ಹಿಂದೆಯಷ್ಟೇ ಎಸ್‍ಐಟಿ ಮುಂದೆ ಹಾಜರಾಗಿದ್ದ ರಮೇಶ್ ಜಾರಕಿಹೊಳಿ, ಯುವತಿ ಸಮ್ಮತಿಯ ಮೇರೆಗೆ ಲೈಂಗಿಕ ಸಂಪರ್ಕದಲ್ಲಿ ಭಾಗಿಯಾಗಿದ್ದು, ಬಳಿಕ ಆಕೆಯೇ ವಿಡಿಯೋ ಮಾಡಿಕೊಂಡು ಈ ರೀತಿ ನಡೆದುಕೊಳ್ಳುತ್ತಾ ಇದ್ದಾಳೆ ಎಂದು ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ. ಆದರೆ ಈ ಮಾಹಿತಿಯನ್ನು ಎಸ್‍ಐಟಿ ಅಧಿಕಾರಿಗಳು ಅಲ್ಲಗೆಳೆದಿದ್ದು, ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಯಾವುದೇ ಬೆಳವಣಿಗೆಯೂ ನಡೆದಿಲ್ಲ. ತನಿಖೆಯ ಬಳಿಕ ಸಂಪೂರ್ಣ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ ಅಂತ ಈ ಸುದ್ದಿಗೆ ಎಸ್‍ಐಟಿ ಮೂಲಗಳು ಸ್ಪಷ್ಟಪಡಿಸಿವೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿತ್ತು.

Comments

Leave a Reply

Your email address will not be published. Required fields are marked *