ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ ರಂಗೇರಿಸಿತು 100ರ ಪಾರ್ಟಿಸಾಂಗ್!

ನಟ, ನಿರ್ದೇಶಕರಾಗಿ ಮಾತ್ರವಲ್ಲದೇ ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮದ ಮೂಲಕವೂ ಮನೆ ಮಾತಾಗಿರುವವರು ರಮೇಶ್ ಅರವಿಂದ್. ಇತ್ತೀಚೆಗಷ್ಟೇ ಪತ್ತೇದಾರಿಕೆಯ ಗೆಟಪ್ಪಿನಲ್ಲಿ ಮಿಂಚಿ ಗೆದ್ದಿದ್ದ ರಮೇಶ್, ಇದೀಗ ಮತ್ತೆ 100 ಅನ್ನೋ ಸಿನಿಮಾ ಮೂಲಕ ಮತ್ತೊಂದು ಅವತಾರದಲ್ಲಿ ಪ್ರೇಕ್ಷಕರನ್ನು ತಾಕುವ ಖುಷಿಯಲ್ಲಿದ್ದಾರೆ. ಅದೇ ಖುಷಿಯಲ್ಲಿ ಚಿತ್ರತಂಡ ರಮೇಶ್ ಅರವಿಂದ್ ಅವರ ಬರ್ತ್‍ಡೇ ಸ್ಪೆಷಲ್ ಎಂಬಂತೆ 100 ಚಿತ್ರದ ಚೆಂದದ ಲಿರಿಕಲ್ ವಿಡಿಯೋ ಸಾಂಗ್ ಅನ್ನು ಬಿಡುಗಡೆಗೊಳಿಸಿದೆ.

ಈ ಹಿಂದೆ ಸದಭಿರುಚಿಯ ಸಿನಿಮಾಗಳ ಮೂಲಕ ಹೆಸರಾಗಿದ್ದ ಎಂ.ರಮೇಶ್ ರೆಡ್ಡಿ ನಂಗಲಿ ನಿರ್ಮಾಣದಲ್ಲಿ ‘100’ ಚಿತ್ರ ಮೂಡಿ ಬಂದಿದೆ. ಕೊರೊನಾ ಸಂಕಷ್ಟ ಒಂದಿಲ್ಲದೇ ಹೋಗಿದ್ದರೆ ಖಂಡಿತವಾಗಿಯೂ ಇಷ್ಟು ಹೊತ್ತಿಗೆಲ್ಲ ಈ ಚಿತ್ರ ಪ್ರೇಕ್ಷಕರ ಮುಂದೆ ಬಂದಿರುತ್ತಿತ್ತು. ಆ ಹಿನ್ನಡೆಯನ್ನೂ ಲೆಕ್ಕಿಸದೆ ಚಿತ್ರತಂಡ ಎಲ್ಲ ಕೆಲಸ ಕಾರ್ಯಗಳನ್ನು ಪೂರೈಸಿಕೊಂಡಿದೆ. ಬಿಡುಗಡೆಯ ಹೊಸ್ತಿಲಲ್ಲಿಯೇ ರಮೇಶ್ ಅವರ ಬರ್ತ್‍ಡೇಗಾಗಿ ಈ ಲಿರಿಕಲ್ ವೀಡಿಯೋ ಲಾಂಚ್ ಮಾಡಲಾಗಿದೆ.

ಇದು ಪಾರ್ಟಿ ಮೂಡಿಗೆ ಜಾರಿಸುವಂಥ ಮಜವಾದ ಹಾಡು. ವಿಶೇಷ ಅಂದ್ರೆ ಈ ಹಾಡಿಗೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಕಿನ್ನಲ್ ರಾಜ್, ಪ್ರಮೋದ್ ಮರವಂತೆ ಮತ್ತು ಭಾಸ್ಕರ್ ಬಂಗೇರ ಸೇರಿಕೊಂಡು ಈ ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ರಮೇಶ್ ಅರವಿಂದ್, ಅನನ್ಯಾ ಭಟ್ ಮತ್ತು ನೀತು ಸುಬ್ರಹ್ಮಣ್ಯ ಅಷ್ಟೇ ಮಜವಾಗಿ ಹಾಡಿದ್ದಾರೆ.

ಈವತ್ತಿಗೆ ಸೋಶಿಯಲ್ ಮೀಡಿಯಾ ಅನ್ನೋದು ಸರ್ವವ್ಯಾಪಿಯಾಗಿದೆ. ಮನಸ್ಥಿತಿ ನೆಟ್ಟಗಿದ್ದರೆ ಇದನ್ನು ಸಕಾರಾತ್ಮಕವಾಗಿಯೇ ಬಳಸಿಕೊಳ್ಳಬಹುದು. ಆದ್ರೆ ಕೆಲ ವಿಕೃತರು ಸಾಮಾಜಿಕ ಜಾಲತಾಣಗಳ ವ್ಯಾಪ್ತಿ, ವಿಸ್ತಾರಗಳನ್ನು ಸಮಾಜ ಬಾಹಿರ ದಂಧೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದುವೇ ಹಲವರ ನೆಮ್ಮದಿಗೆ ಕುತ್ತು ತಂದಿದೆ. ಕೆಲ ಸಂದರ್ಭಗಳಲ್ಲಿ ಜೀವ ಹಾನಿಗಳೂ ಸಂಭವಿಸುತ್ತಿವೆ. ಇದೇ ಕಥಾ ಹಂದರ ಹೊಂದಿರೋ ಚೆಂದದ ಕಥೆಯನ್ನಿಲ್ಲಿ ರಮೇಶ್ ಅರವಿಂದ್ ನಿರ್ದೇಶನ ಮಾಡಿದ್ದಾರಂತೆ.

Comments

Leave a Reply

Your email address will not be published. Required fields are marked *