ರಂಧ್ರವಿರೋ N-95 ಮಾಸ್ಕ್‌ನಿಂದ ಕೊರೊನಾ ತಡೆಗಟ್ಟಲು ಸಾಧ್ಯವಿಲ್ಲ: ಕೇಂದ್ರ ಎಚ್ಚರಿಕೆ

ನವದೆಹಲಿ: ಮಾಹಾಮಾರಿ ಕೊರೊನಾ ಹರಡುವುದನ್ನು ತಡೆಗಟ್ಟಲು ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗಿದೆ. ಆದರೆ ಉಸಿರಾಡಲು ರಂಧ್ರಗಳಿರುವ N-95 ಮಾಸ್ಕ್ ಬಳಕೆ ಮಾಡುವುದರಿಂದ ಕೋವಿಡ್ 19 ಹರಡುವುದನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾ ನಿರ್ದೇಶಕರ ರಾಜೀವ್ ಗರ್ಗ್ ಎಲ್ಲಾ ರಾಜ್ಯಗಳ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ರಂಧ್ರಗಳಿರುವ N-95 ಮಾಸ್ಕ್ ಬಳಕೆ ಮಾಡುವುದರಿಂದ ಕೊರೊನಾದಿಂದ ಬಚಾವಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಮುಖ ಮತ್ತು ಬಾಯಿ ಕವರ್ ಮಾಡುವಂತಹ ಮನೆಯಲ್ಲೇ ತಯಾರಿಸಿದ ಮಾಸ್ಕ್ ಗಳನ್ನು ಬಳಸಿ ಎಂದು ಕೂಡ ಪತ್ರದಲ್ಲಿ ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ N-95 ಮಾಸ್ಕ್ ಗಳ ಅನುಚಿತ ಬಳಕೆಯನ್ನು ತಡೆಯಲು ಸೂಕ್ತ ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ರಾಜೀವ್ ಗರ್ಗ್ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

N-95 ರಂಧ್ರ ಇರುವ ಮಾಸ್ಕ್ ಬಳಕೆ ಮಾಡುವುದರಿಂದ ವೈರಸ್ ದೇಹದೊಳಗೆ ಸೇರುವುದನ್ನು ಹಾಗೂ ಸೋಂಕಿತ ವ್ಯಕ್ತಿಯ ಶರೀರದಿಂದ ಹೊರ ಬರುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಕಳೆದ ಏಪ್ರಿಲ್ ತಿಂಗಳಲ್ಲಿ ಸರ್ಕಾರ ಮುಖ ಮತ್ತು ಬಾಯಿ ಕವರ್ ಆಗುವಂತಹ ಮನೆಯಲ್ಲೇ ತಯಾರಿಸಿದ ಮಾಸ್ಕ್ ಗಳನ್ನು ಬಳಕೆ ಮಾಡಿ, ಅದರಲ್ಲೂ ಮನೆಯಿಂದ ಹೊರಗಡೆ ಹೋಗುವುದಾದರೆ ಮಾಸ್ಕ್ ಕಡ್ಡಾಯವಾಗಿ ಧರಿಸಿ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಇದೀಗ ದೇಶದಲ್ಲಿ ಹಲವು ವಿಧದ ಮಾಸ್ಕ್ ಗಳು ಬಳಕೆಯಲ್ಲಿವೆ. ಅವುಗಳಲ್ಲಿ N-95 ಮಾಸ್ಕ್ ಅತ್ಯಂತ ಫೇಮಸ್ ಆಗಿದ್ದು, ಹೆಚ್ಚು ಜನ ಖರೀದಿಸಿ ಬಳಕೆ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *