ರಂಗಿತರಂಗ ನಿರ್ಮಾಪಕರಿಂದ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಇತ್ತೀಚೆಗೆ ಥ್ರಿಲ್ಲರ್ ಕಥಾ ಹಂದರವುಳ್ಳ ಸಿನಿಮಾಗಳು ಹೆಚ್ಚು ಮೂಡಿಬರುತ್ತಿದ್ದು, ಪ್ರೇಕ್ಷಕರಿಗೂ ಈ ರೀತಿಯ ಸಿನಿಮಾಗಳು ಹಿಡಿಸುತ್ತವೆ. ಹೀಗಾಗಿ ಜನಪ್ರಿಯತೆ ಪಡೆಯುತ್ತವೆ. ಇದಕ್ಕೆ ಉದಾಹರಣೆಯೇ ರಂಗಿತರಂಗ ಸಿನಿಮಾ. ಈ ಸಿನಿಮಾವನ್ನು ಕರಾವಳಿ ಭಾಗದಲ್ಲಿ ಚಿತ್ರೀಕರಿಸಲಾಗಿದ್ದು, ಯಕ್ಷಗಾನದ ಮೂಲಕವೇ ಥ್ರಿಲ್ಲರ್ ಕಥೆಯನ್ನು ಹೆಣೆಯಲಾಗಿದೆ. ಹೀಗಾಗಿ ಈ ಸಿನಿಮಾ ಭಾರೀ ಸದ್ದು ಮಾಡಿತ್ತು. ಇದೀಗ ಅದೇ ಸಿನಿಮಾದ ನಿರ್ಮಾಪಕರು ಇಂತಹದ್ದೇ ಮತ್ತೊಂದು ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ.

ರಂಗಿತರಂಗ ಸಿನಿಮಾ ಬಳಿಕ ನಟ ರಕ್ಷಿತ್ ಶೆಟ್ಟಿ ಜೊತೆ ಸೇರಿ ಅವನೇ ಶ್ರೀಮನ್ನಾರಾಯಣ ಸಿನಿಮಾಗೆ ಬಂಡವಾಳ ಹೂಡಿದ್ದ ಎಚ್.ಕೆ.ಪ್ರಕಾಶ್ ಇದೀಗ ಅವರದ್ದೇ ಶ್ರೀ ದೇವಿ ಎಂಟರ್‍ಟೈನರ್ಸ್ ಬ್ಯಾನರ್ ಅಡಿ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ ನಿರ್ಮಿಸಲು ಮುಂದಾಗಿದ್ದು, ನಿರ್ದೇಶಕ ಭರತ್ ಜಿ.ಜೊತೆ ಸೇರಿ ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಹೊಸ ನಿರ್ದೇಶಕರ ಮೂಲಕ ಸಿನಿಮಾ ಮಾಡಲು ಎಚ್.ಕೆ.ಪ್ರಕಾಶ್ ಅವರು ಮುಂದಾಗಿದ್ದು, ರೇಡಿಯೋ ಹಾಗೂ ಜಾಹೀರಾತಿನಲ್ಲಿ ಕೆಲಸ ಮಾಡಿದ್ದ ಭರತ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹಾರರ್ ಕಾಮಿಡಿ ಸಿನಿಮಾ ಮೂಲಕ ನಿರ್ದೇಶನದ ಅಗ್ನಿ ಪರೀಕ್ಷೆಗೆ ಇಳಿದಿದ್ದಾರೆ. ಇದೊಂದು ನಿಗೂಢ ಕಥೆಯಾಗಿದ್ದು, ಇದಕ್ಕಾಗಿ ಕಾಡಿನ ಮಧ್ಯ ಇರುವ ಬ್ರಿಟಿಷ್ ವಾಸ್ತುಶಿಲ್ಪದ 103 ವರ್ಷಗಳ ಹಳೆಯ ಕಟ್ಟಡವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಚಿತ್ರ ಬಗ್ಗೆ ತಿಳಿಸಿದ್ದಾರೆ.

ಚಿತ್ರವು ಹಾಸ್ಯದ ಮೂಲಕವೇ ಭಯವನ್ನು ಉಂಟು ಮಾಡುತ್ತದೆ. ಆ ರೀತಿಯ ಥ್ರಿಲ್ಲರ್ ಕಥೆಯನ್ನು ಹೆಣೆದಿದ್ದೇನೆ. ಅಲ್ಲದೆ ದೆವ್ವಗಳ ಅಸ್ಥಿತ್ವದ ಕುರಿತು ಹಾಗೂ ಪುನರ್‍ಜನ್ಮದ ಕುರಿತು ಸಹ ಪ್ರಶ್ನಿಸುತ್ತದೆ. ಚಿತ್ರಕ್ಕಾಗಿ ಈಗಾಗಲೇ ಲೋಕೇಶನ್ ಗುರುತಿಸಿದ್ದು, ಊಟಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಪ್ರಸ್ತುತ ಗ್ರೌಂಡ್ ವರ್ಕ್ ಮಾಡುತ್ತಿದ್ದೇವೆ. ಲಾಕ್‍ಡೌನ್ ಮುಗಿದ ಬಳಿಕ ಚಿತ್ರೀಕರಣ ಪ್ರಾರಂಭಿಸಲು ಚಿಂತನೆ ನಡೆಸಿದ್ದೇವೆ ಎಂದು ನಿರ್ದೇಶಕ ಭರತ್ ಮಾಹಿತಿ ನೀಡಿದ್ದಾರೆ.

ನಿರ್ಮಾಪಕರು ಸಹ ಚಿತ್ರದ ಟೆಕ್ನಿಸಿಯನ್ಸ್ ಗಾಗಿ ಹುಡುಕಾಟ ನಡೆಸಿದ್ದು, ನಿರ್ದೇಶಕರು ಪ್ರಮುಖ ಪಾತ್ರ ನಿರ್ವಹಿಸುವ ನಟರಿಗಾಗಿ ಹುಡುಕಾಟ ನಡೆಸಿದ್ದಾರಂತೆ. ಸೋಮವಾರದಿಂದಲೇ ಆಡಿಶನ್ಸ್ ನಡೆಯುತ್ತಿದೆಂತೆ. ಒಟ್ನಲ್ಲಿ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ ಸೆಟ್ಟೇರಲು ಚಿತ್ರತಂಡ ಎಲ್ಲ ರೀತಿಯ ಸಿದ್ಧತೆ ನಡೆಸಿದ್ದು, ಪ್ರಮುಖ ಪಾತ್ರಗಳಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.

Comments

Leave a Reply

Your email address will not be published. Required fields are marked *