ರಂಗಸ್ಥಳದಲ್ಲೇ ಕುಸಿದು ಯಕ್ಷಗಾನ ಕಲಾವಿದ ಸಾಧು ಕೊಠಾರಿ ನಿಧನ

ಉಡುಪಿ: ರಂಗಸ್ಥಳದಲ್ಲಿ ಯಕ್ಷಗಾನದ ಪದ್ಯಕ್ಕೆ ಕುಣಿಯುತ್ತಿರುವ ಸಂದರ್ಭದಲ್ಲಿಯೇ ಕಲಾವಿದ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಮಂದಾರ್ತಿ ದುರ್ಗಾಪರಮೇಶ್ವರಿ ಮೇಳದ ಪ್ರಧಾನ ವೇಷಧಾರಿ ಸಾಧು ಕೊಠಾರಿ (58) ಹೃದಯಾಘಾತದಿಂದ ರಂಗಸ್ಥಳದಲ್ಲೇ ಅಸ್ವಸ್ಥಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಮೃತಪಟ್ಟಿದ್ದಾರೆ. ಈ ಘಟನೆ ಶಿರಿಯಾರದ ಕಾಜ್ರಲ್ಲಿ ಸಮೀಪದ ಕಲ್ಬೆಟ್ಟು ಎನ್ನುವಲ್ಲಿ ಬೆಳಗ್ಗಿನ ಜಾವ ಸಂಭವಿಸಿದೆ.

ಯಕ್ಷಗಾನ ಮೇಳದ ಪ್ರಧಾನ ವೇಷಧಾರಿ ಪಾತ್ರ ನಿರ್ವಹಿಸುತ್ತಿದ್ದ, ಕೊಠಾರಿ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ‘ಮಹಾಕಲಿ ಮಗದೇಂದ್ರ’ ಪ್ರಸಂಗದಲ್ಲಿ ಮಾಗಧನಾಗಿ ಪ್ರದರ್ಶನ ನೀಡುತ್ತಿದ್ದ ಸಂದರ್ಭ ರಂಗದಲ್ಲೇ ಎದೆ ನೋವಿನಿಂದ ತೀವ್ರ ಅಸ್ವಸ್ಥಗೊಂಡರು. ನಂತರ ತಕ್ಷಣ ವೇಷ ಕಳಚಿ, ಮೇಳದ ಪ್ರಧಾನ ಭಾಗವತ ಸದಾಶಿವ ಅಮೀನ್ ಹಾಗೂ ಮೇಳದ ಮ್ಯಾನೇಜರ್ ಮತ್ತು ಸಹಕಲಾವಿದರು, ಸ್ಥಳೀಯರು ಜೊತೆಯಾಗಿ ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ. ಆದರೆ ಅವರು ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ.

ಬಾರಕೂರಿನಲ್ಲಿ ಕುಟುಂಬದೊಂದಿಗೆ ನೆಲೆಸಿದ್ದ ಸಾಧು ಕೊಠಾರಿಯವರು, ಬಡಗುತಿಟ್ಟಿನ ಉತ್ತಮ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಸುಮಾರು 40 ವರ್ಷಕ್ಕೂ ಹೆಚ್ಚು ಕಾಲ ಯಕ್ಷ ತಿರುಗಾಟ ನಡೆಸಿದ್ದರು. ಹಲವಾರು ಯಕ್ಷಗಾನ ಮೇಳದ ಕಲಾವಿದರು, ಸಂಘಟನೆಗಳು ಸಂತಾಪ ಸೂಚಿಸಿವೆ.

Comments

Leave a Reply

Your email address will not be published. Required fields are marked *