ಯೋಧರಿಗೆ ಬುಲೆಟ್ ಪ್ರೂಫ್ ರಹಿತ ಟ್ರಕ್, ಪ್ರಧಾನಿಗೆ 8,400 ಕೋಟಿ ವಿಮಾನ, ಇದು ನ್ಯಾಯವೇ- ರಾಹುಲ್ ಪ್ರಶ್ನೆ

ನವದೆಹಲಿ: ಕೇಂದ್ರ ಸರ್ಕಾರ ವಿವಿಐಪಿಗಳಿಗಾಗಿ ಖರೀದಿಸಿರುವ ವಿಶೇಷ ವಿಮಾನದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಟುವಾಗಿ ಟೀಕಿಸುತ್ತಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿ ಸೈನಿಕರ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಟ್ವೀಟ್ ಮಾಡುವ ಮೂಲಕ ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ, ಬುಲೆಟ್ ಪ್ರೂಫ್ ರಹಿತ ಟ್ರಕ್‍ಗಳಲ್ಲಿ ಸೈನಿಕರನ್ನು ಹುತಾತ್ಮರಾಗಲು ಕಳುಹಿಸಲಾಗುತ್ತಿದೆ. ಆದರೆ ಸರ್ಕಾರ ಪ್ರಧಾನಿಗಾಗಿ 8,400 ಕೋಟಿ ರೂ.ಗಳ ವಿಮಾನ ಮೀಸಲಿಟ್ಟಿದೆ. ಇದು ನ್ಯಾಯವೇ ಎಂದು ಅವರು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ಹಂಚಿಕೊಂಡಿರುವ ವೀಡಿಯೋದಲ್ಲಿ ಟ್ರಕ್ ಒಳಗೆ ಕುಳಿತಿದ್ದ ಕೆಲ ಸೈನಿಕರು, ತಮ್ಮ ಅಧಿಕಾರಿ ಬುಲೆಟ್ ಪ್ರೂಫ್ ಟ್ರಕ್‍ನಲ್ಲಿ ಕಳುಹಿಸುವ ಮೂಲಕ ನಮ್ಮ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ವರ್ಷ ಸಂಭವಿಸಿದ ಪುಲ್ವಾಮಾ ದಾಳಿ ಬಳಿಕ ಕಾಶ್ಮೀರ ಕಣಿವೆಯಲ್ಲಿ ಸೈನ್ಯದ ಬೆಂಗಾವಲು ಪಡೆಯ ಸುರಕ್ಷತೆ ಖಚಿತಪಡಿಸಿಕೊಳ್ಳಲು ಮೈನ್-ಪ್ರೊಟೆಕ್ಟೆಡ್ ವಾಹನಗಳು(ಎಂಪಿವಿ) ಹಾಗೂ 30 ಸೀಟ್‍ಗಳ ಬಸ್‍ಗಳನ್ನು ಖರೀದಿಸುವುದಾಗಿ ಸಿಆರ್ ಪಿಎಫ್ ಹೇಳಿದೆ.

ಜಮ್ಮು ಕಾಶ್ಮೀರದಂತಹ ಸೂಕ್ಷ್ಮ ಪ್ರದೇಶದ ರಸ್ತೆಗಳಲ್ಲಿ ಸಂಚರಿಸುವ ಸೈನಿಕರಿಗೆ ಗೃಹ ಸಚಿವಾಲಯ ಕಳೆದ ವರ್ಷ ವಿಮಾನದಲ್ಲಿ ಸಂಚರಿಸುವ ಅವಕಾಶ ನೀಡಲಾಗಿದೆ ಎಂದು ಘೋಷಿಸಿತ್ತು. ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರು ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಅಧಿಕಾರಿಗಳು(ಸಿಎಪಿಎಫ್) ಕೆಲಸಕ್ಕೆ ಹಾಜರಾಗಲು, ಪ್ರವಾಸಕ್ಕೆ ತೆರಳಲು ಅಥವಾ ರಜೆ ಮೇಲೆ ಮನೆಗೆ ತೆರಳು ವಾಣಿಜ್ಯ ವಿಮಾನಗಳನ್ನು ಬಳಸಬಹುದು ಎಂದು ತಿಳಿಸಿತ್ತು.

Comments

Leave a Reply

Your email address will not be published. Required fields are marked *